ರಾಜ್ಯ ಪೊಲೀಸ್ ಇಲಾಖೆಯ ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಡಿಕೇರಿ ಮೂಲದ ಶೃತಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯಿಂದ ಕಲಬುರಗಿಯ ಪೊಲೀಸ್ ಟ್ರೈನಿಂಗ್ ಕಾಲೇಜಿಗೆ ನಿಯುಕ್ತಿಗೊಳಿಸಲಾಗಿದೆ.
ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಾಗೂ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು.
ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ASP ಶೃತಿ ಅವರ ವರ್ಗಾವಣೆ ಸಾರ್ವಜನಿಕರಲ್ಲಿ ಬೇಸರ ಉಂಟುಮಾಡಿದೆ.
ಕೊರೋನ ಸಂಕಷ್ಟದ ಅವಧಿಯಲ್ಲಿ ತಮ್ಮ ಬಿಡುವಿಲ್ಲದ ವೇಳೆಯಲ್ಲೂ ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಮೂಲಕ ಅವುಗಳ ಹಸಿವು ನೀಗಿಸುವ ಕೆಲಸ ಮಾಡಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಶೃಂಗೇರಿ ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಿದ್ದ ಶೃತಿ;
ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸಿದ ASP ಶೃತಿಯವರು ಶೃಂಗೇರಿಯಲ್ಲಿ ಬಾಲಕಿಯೋರ್ವಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಶೃತಿ, ಅದನ್ನು ಸಮರ್ಥವಾಗಿ ಬೇಧಿಸಿ 50ಕ್ಕೂ ಹೆಚ್ಚು ಆರೋಪಿಗಳನ್ನು ಕಂಬಿಯ ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು.
ASP ಶೃತಿ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಕರ್ನಾಟಕ ಲೋಕಾಯುಕ್ತದಲ್ಲಿ DySP ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಜಿ. ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.





0 Comments