ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಆರಂಭವಾಗಿರುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ಚಾಲನೆ ನೀಡಿದರು. 

ಇದನ್ನೂ ಓದಿ : ಶೃಂಗೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ನಿಶ್ಮಿತ ಬಸ್ ಪಲ್ಟಿ ! 20 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ 

ರಾಜ್ಯಾದ್ಯಂತ ಉಂಟಾಗಿರುವ ಜೀವ ಜಲದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಹಾಗೂ ಕನ್ನಡಿಗರಿಗೆ ಉಂಟಾಗಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಈ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಿ ಪವಿತ್ರ ಜಲ ಸಂಗ್ರಹಣೆ ಮಾಡಿ ತನ್ಮೂಲಕ ರಾಜ್ಯದ ಜನರನ್ನು ಸಂಘಟಿಸಿ ಸಮರ್ಪಕ ನೀರಿನ ವ್ಯವಸ್ಥೆಯನ್ನು ಜನರಿಗೆ ತಲುಪಿಸುವುದು ಈ ಜನತಾ ಜಲಧಾರೆಯ ಉದ್ದೇಶವಾಗಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದರು. 




ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಕೋಟೆಹೊಳೆ ಭದ್ರಾ ನದಿಯ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪವಿತ್ರ ಭದ್ರಾ ನದಿಯ ನೀರನ್ನು ಜನತಾ ಜಲಧಾರೆಯ ರಥಕ್ಕೆ ಹಾಕಲಾಯಿತು. 


ಜನತಾ ಜಲಧಾರೆ ರಥವು ರಾಜ್ಯದೆಲ್ಲೆಡೆ ಸಂಚರಿಸಿ ರಾಜ್ಯದ ಅನೇಕ ನದಿಗಳ ನೀರನ್ನು ಸಂಗ್ರಹಿಸಲಿದೆ. ಈ ರಥವು ಇಂದು ನರಸಿಂಹರಾಜಪುರ ಹಾಗೂ ಬಾಳೆಹೊನ್ನೂರಿನಲ್ಲಿ ಸಂಚರಿಸಿ ನಾಳೆ ಶೃಂಗೇರಿಯಲ್ಲಿ ಸಂಚಾರ ಮಾಡಲಿದೆ. ನಾಳೆ ಶೃಂಗೇರಿಗೆ ಆಗಮಿಸಲಿರುವ ಈ ರಥಯಾತ್ರೆಯು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಹಾಗೂ ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಶ್ರೀ ಸುಧಾಕರ್ ಎಸ್.ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿದ್ದು ಈಗಾಗಲೇ ಭರದಿಂದ ಸಿದ್ಧತೆಗಳು ಸಾಗಿದೆ. ನಗರದ ವೃತ್ತಗಳಿಗೆ ಜೆಡಿಎಸ್ ಪಕ್ಷದ ಬಂಟಿಂಗ್ಸ್ ನ್ನು ಕಟ್ಟಿ ಅಲಂಕರಿಸಲಾಗಿದ್ದು ರಥಯಾತ್ರೆಯ ಕುರಿತಾದ ಎಲ್ಲಾ ತಯಾರಿಗಳನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಡೆಸುತ್ತಿದ್ದಾರೆ. 

ಇಂದು ಈ ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಭೋಜೆಗೌಡ, ಜಾತ್ಯಾತೀತ ಜನತಾದಳ ಪಕ್ಷದ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು

ಅನಾಥ ವ್ಯಕ್ತಿಯ ಶವ ಪತ್ತೆ :

ಚಿಕ್ಕಮಗಳೂರು : ಅನಾಥ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಆಲ್ದೂರಿನಲ್ಲಿ ವರದಿಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಕಬ್ಬಿನ ಸೇತುವೆ ಕೆಳಗೂರು ಎಂಬಲ್ಲಿ 55 ವರ್ಷ ಪ್ರಾಯದ ಅನಾಥ ವ್ಯಕ್ತಿಯ ಶವ ಪತ್ತೆಯಾಗಿದ್ದು ಈ ವ್ಯಕ್ತಿಯ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಆಲ್ದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. 

ವ್ಯಕ್ತಿಯ ಮೃತದೇಹವನ್ನು ಚಿಕ್ಕಮಗಳೂರಿನ ಜಿಲ್ಲಾ ಶವಾಗಾರದಲ್ಲಿರಿಸಲಾಗಿದ್ದು ವ್ಯಕ್ತಿಯ ಪರಿಚಯ ಹೊಂದಿದವರು ಯಾರಾದರೂ ಇದ್ದಲ್ಲಿ ಆಲ್ದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.