ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಮತ್ತೆ ಹುಲಿ ದಾಳಿ ಆರಂಭವಾಗಿದ್ದು ಹುಲಿಯ ದಾಳಿಗೆ ಹಸು ಒಂದು ಬಲಿಯಾಗಿರುವ ಘಟನೆ ಮೂಡಿಗೆರೆಯಲ್ಲಿ ಬೆಳಕಿಗೆ ಬಂದಿದೆ. 

ಇದನ್ನೂ ಓದಿ : ಶಾಸಕ ಟಿ.ಡಿ ರಾಜೇಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಶೃಂಗೇರಿ ಯುವಕರು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಬಿ. ಹೊಸಳ್ಳಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಹಸುವು ಸಾವನ್ನಪ್ಪಿದ್ದು ಹಸುವನ್ನು ಕಳೆದುಕೊಂಡ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ದಾಳಿಗೊಳಗಾಗಿ ಮೃತಪಟ್ಟಿರುವ ಹಸುವು ಗೋಪಾಲ್ ಎಂಬುವವರಿಗೆ ಸೇರಿದ್ದಾಗಿದೆ. ಈ ಕುರಿತು ಅಳಲನ್ನು ತೋಡಿಕೊಂಡಿರುವ ಅವರು ಹಾಲನ್ನು ನೀಡುವ ಹಸುವನ್ನು ಕಳೆದುಕೊಂಡು ಅತ್ಯಂತ ದುಃಖಿತರಾಗಿದ್ದೇವೆ. ಈ ಭಾಗದಲ್ಲಿ ನಿರಂತರವಾಗಿ ಹುಲಿ ದಾಳಿ ನಡೆಯುತ್ತಿದ್ದು ಈ ಕುರಿತು ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಸಮರ್ಪಕವಾದ ಪರಿಹಾರವನ್ನು ಒದಗಿಸಬೇಕೆಂದು ಕೋರಿದ್ದಾರೆ. 

ಹಸುವಿನ ಮೇಲೆ ದಾಳಿ ನಡೆದಿರುವ ಸ್ಥಳಕ್ಕೆ ಜಾನುವಾರು ಅಧಿಕಾರಿ ಅಜೀಜ್ ಅಹಮದ್ ಖಾನ್ ಅರಣ್ಯ ರಕ್ಷಕ ಮೋಹಸಿನ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು