ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಾದ್ಯಂತ ವಿವಾದ ಸೃಷ್ಟಿ ಮಾಡಿದ್ದ ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದದ ಕುರಿತಾಗಿ ಹೈ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ನಡೆಸಿದ ಬಂದ್ ನ ನಂತರ ಮುಸಲ್ಮಾನರೊಂದಿಗಿನ  ವ್ಯಾಪಾರ ವಹಿವಾಟಿಗೆ ತಡೆಯೊಡ್ಡಬೇಕು ಎಂಬ ದೊಡ್ಡ ಸದ್ದು ರಾಜ್ಯಾದ್ಯಂತ ಕೇಳಿತ್ತು. ಅಂತೆಯೇ ಜಾತ್ರೆಯ ಸಂದರ್ಭಗಳಲ್ಲಿ ಮುಸಲ್ಮಾನರಿಗೆ ಅಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಬಂಧ ಪಟ್ಟವರಿಗೆ ಮನವಿ ಮಾಡಿದ್ದರು ಪ್ರಸ್ತುತ ಅದರ ಮುಂದುವರಿದ ಭಾಗವಾಗಿ ಜಟ್ಕಾ V/s ಹಲಾಲ್ ಮಾಂಸದ ಅಭಿಯಾನ ಆರಂಭವಾಗಿದೆ. 

ಇದನ್ನೂ ಓದಿ : ತಲೆಯ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ

ಯುಗಾದಿ ಹಬ್ಬದ ಮಾರನೆಯ ದಿನವಾದ ಇಂದು ವರ್ಷತೊಡಕು ಹಬ್ಬ ಎಲ್ಲೆಡೆ ಆಚರಣೆಯಲ್ಲಿದ್ದು ಈ ಹಬ್ಬದಲ್ಲಿ ಮಾಂಸಾಹಾರದ ಅಡುಗೆ ಮಾಡಿ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಸೇವಿಸುತ್ತಾರೆ. ಈ ಹಬ್ಬಕ್ಕೆ ಕುರಿ ಹಾಗೂ ಕೋಳಿಯ ಹಲಾಲ್ ಮಾಡಿದ ಮಾಂಸವನ್ನು ಮುಸಲ್ಮಾನರಿಂದ ಖರೀದಿ ಮಾಡದೇ ಹಿಂದೂಗಳು ನಡೆಸುವ ಜಟ್ಕಾ ಕಟ್ ಮಾಂಸವನ್ನು ಖರೀದಿ ಮಾಡಬೇಕು ಎಂದು ಅನೇಕ ಕಡೆಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಭಿಯಾನ ನಡೆಸಿದ್ದರು. ಅಂತೆಯೇ ಇಷ್ಟು ವರ್ಷಗಳ ಪೈಕಿಯ ವ್ಯಾಪಾರ ನೋಡಿದಾಗ ಈ ಬಾರಿ ಹಿಂದೂ ಸಂಘಟಕರ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿರುವುದು ಕಂಡು ಬಂದಿದೆ. 

ಚಿಕ್ಕಮಗಳೂರು ಮೂಡಿಗೆರೆ ಭಾಗಗಳ ಹಿಂದೂ ವರ್ತಕರ ಮಾಂಸದ ಅಂಗಡಿಗಳಲ್ಲಿ ಉತ್ತಮ ವ್ಯಾಪಾರ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆಯೇ ಗ್ರಾಹಕರಿಂದ ಆರ್ಡರ್ ಪಡೆದು ಮಧ್ಯ ರಾತ್ರಿಯಿಂದಲೇ ಎಲ್ಲಾ ತಯಾರಿಗಳನ್ನು ನಡೆಸಿ ವ್ಯಾಪಾರವನ್ನು ನಡೆಸುತ್ತಿದ್ದಾರೆ. 

ಇಷ್ಟು ವರ್ಷಗಳ ಕಾಲ ಮುಸಲ್ಮಾನರ ಅಂಗಡಿಗಳಲ್ಲಿ ತುಂಬಿ ತುಳುಕುತ್ತಿದ್ದ ಜನ ಈ ವಿವಾದ ಹಾಗೂ ಅಭಿಯಾನದ ಕಾರಣವಾಗಿ ಬದಲಾಗಿರುವುದು ಕಂಡು ಬರುತ್ತಿದೆ. ಕೆಲ ಜನರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುಸಲ್ಮಾನರ ಜೊತೆಗೆ ಎಂದಿನಂತೆ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಸಂಖ್ಯೆಯಲ್ಲಿ  ವಿರಳತೆ ಕಂಡು ಬರುತ್ತಿದೆ. ಅನೇಕರು ಹೋಂ ಡೆಲಿವರಿ ಮೂಲಕ ಮನೆ ಬಾಗಿಲಿಗೆ ಜಟ್ಕಾ ಕಟ್ ಮಾಂಸವನ್ನು ತಲುಪಿಸುತ್ತಿದ್ದಾರೆ. 

ಮಾಂಸದ ಅಂಗಡಿ ಹೊಂದಿರುವ ಅನೇಕ ಮುಸ್ಲಿಮರು ತಮಗಾಗುತ್ತಿರುವ ನಷ್ಟದ ಕುರಿತು ಅಳಲನ್ನು ವ್ಯಕ್ತಪಡಿಸಿದ್ದಾರೆ.