ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಜೀವನದಲ್ಲಿ ಜಿಗುಪ್ಸೆ ಹೊಂದಿ ಕೂಲಿ ಕಾರ್ಮಿಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. 

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಪಾಲಂಗಾಲ ಗ್ರಾಮದ  ನಿವಾಸಿ ಕುಂಜ್ಞಾ ಎಂಬಾತ ನೇಣಿಗೆ ಶರಣಾದ ವ್ಯಕ್ತಿ. ತೋಟದ ಮನೆಯಲ್ಲಿ ಕಳೆದ ಅನೇಕ ವರ್ಷಗಳಿಂದ ವಾಸವಾಗಿದ್ದು ಕೂಲಿ ಕೆಲಸವನ್ನು ತಮ್ಮ ಜೀವನದ ಆಶ್ರಯಕ್ಕಾಗಿ ನಡೆಸಿಕೊಂಡು ಬಂದ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಹೊಂದಿ ಈ ನಿರ್ಧಾರವನ್ನು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಂದಾಜಿಸಲಾಗಿದೆ. 


ಇವರಿಗೆ ಮೂರ್ಛೆರೋಗ ಸಹ ಇದ್ದು ಇವರ ಪತ್ನಿ ಕಳೆದ 20 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು ಹಾಗೂ ಮಕ್ಕಳು ಮದುವೆಯಾಗಿ ಕೊಡಗಿನ ಬೇರೆ ಕಡೆಗಳಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಹಾಗೂ ಓರ್ವ ವ್ಯಕ್ತಿಯೇ ಮನೆಯಲ್ಲಿದ್ದ ಕಾರಣ ಈ ರೀತಿಯಾಗಿ ನಿರ್ಧಾರ ಕೈಗೊಂಡು ಮತಪಟ್ಟಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೋಟದ ಮಾಲೀಕರು ದೂರು ನೀಡಿದ್ದು ಪೊಲೀಸರು ಈ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. 


ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಮೃತರನ್ನು ಕಳೆದುಕೊಂಡ ಸಂಬಂಧಿಕರು ಹಾಗೂ ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ.

ಅನಾಥ ವ್ಯಕ್ತಿಯ ಶವ ಪತ್ತೆ :

ಚಿಕ್ಕಮಗಳೂರು : ಅನಾಥ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಆಲ್ದೂರಿನಲ್ಲಿ ವರದಿಯಾಗಿದೆ. 


ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಕಬ್ಬಿನ ಸೇತುವೆ ಕೆಳಗೂರು ಎಂಬಲ್ಲಿ 55 ವರ್ಷ ಪ್ರಾಯದ ಅನಾಥ ವ್ಯಕ್ತಿಯ ಶವ ಪತ್ತೆಯಾಗಿದ್ದು ಈ ವ್ಯಕ್ತಿಯ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಆಲ್ದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. 


ವ್ಯಕ್ತಿಯ ಮೃತದೇಹವನ್ನು ಚಿಕ್ಕಮಗಳೂರಿನ ಜಿಲ್ಲಾ ಶವಾಗಾರದಲ್ಲಿರಿಸಲಾಗಿದ್ದು ವ್ಯಕ್ತಿಯ ಪರಿಚಯ ಹೊಂದಿದವರು ಯಾರಾದರೂ ಇದ್ದಲ್ಲಿ ಆಲ್ದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.