ಎಸ್.ಕೆ.ಬಾರ್ಡರ್ : (ನ್ಯೂಸ್ ಮಲ್ನಾಡ್ ವರದಿ) ಕೆಕೆಬಿ ಬಸ್ ಹಾಗೂ ಲಾರಿ ನಡುವೆ ನಿನ್ನೆ ಸಂಜೆ ರಸ್ತೆ ಅಪಘಾತ ಸಂಭವಿಸಿದೆ.
ದಟ್ಟ ಅರಣ್ಯ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯ ಎಸ್.ಕೆ. ಬಾರ್ಡರ್ ಬಳಿ ಈ ಅಪಘಾತ ಸಂಭವಿಸಿದ್ದು ಮಂಗಳೂರಿನಿಂದ ಕುದುರೆಮುಖ, ಕಳಸ, ಹೊರನಾಡು ಹಾಗೂ ಶೃಂಗೇರಿಯನ್ನು ಸಂಪರ್ಕಿಸುವ ಮಾರ್ಗ ಎಸ್.ಕೆ. ಬಾರ್ಡರ್ ಆಗಿದೆ. ಹೆಚ್ಚಿನ ತಿರುವುಗಳನ್ನು ಹೊಂದಿರುವ ಈ ರಸ್ತೆಯಲ್ಲಿ ವಾಹನವು ಚಾಲಕನ ಸ್ವಲ್ಪವೇ ನಿಯಂತ್ರಣವನ್ನು ಕಳೆದುಕೊಂಡರು ಕೂಡ ಅಪಾಯ ಕಟ್ಟಿಟ್ಟ ಬುತ್ತಿ.
ನಿನ್ನೆ ಸಂಜೆ ಮಂಗಳೂರಿನಿಂದ ಹೊರನಾಡು ಕಡೆಗೆ ತೆರಳುತ್ತಿದ್ದ ಕೆಕೆಬಿ ಬಸ್ ಗೆ ಲಾರಿ ಸಮೀಪಿಸಿದ ಕಾರಣ ಈ ರಸ್ತೆ ಅಪಘಾತ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣದಿಂದಾಗಿ ಓರ್ವ ಪ್ರಯಾಣಿಕನೂ ಗಂಭೀರವಾಗಿ ಗಾಯಗೊಳ್ಳದೇ ಸುರಕ್ಷಿತವಾಗಿರುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಅಪಘಾತದಿಂದಾಗಿ ಕೆಕೆಬಿ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಲಾರಿಯು ಕೂಡ ಜಖಂಗೊಂಡಿದೆ. ಬಸ್ಸಿನ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಉಂಟಾಗುತ್ತಿದ್ದ ದೊಡ್ಡಮಟ್ಟದ ಅಪಘಾತವು ನಿಯಂತ್ರಣಕ್ಕೆ ದೊರೆತು ಪ್ರಯಾಣಿಕರು ಸುರಕ್ಷಿತವಾಗಿರುವಂತೆ ಮಾಡಿದೆ.
ಹೆಚ್ಚಿನ ತಿರುವುಗಳನ್ನು ಹೊಂದಿರುವ ಎಸ್.ಕೆ.ಬಾರ್ಡರ್ - ಕೆರೆಕಟ್ಟೆ ಮಾರ್ಗದಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ರಸ್ತೆ ಅಗಲೀಕರಣ ಗೊಂಡಲ್ಲಿ ಈ ರೀತಿಯ ಅಪಘಾತಗಳು ತಪ್ಪುತ್ತದೆ ಎಂದು ವಾಹನ ಸವಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ





0 Comments