ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜನ್ಮದಿನದ ಆಚರಣೆ ನಾಳೆ ದೇಶಾದ್ಯಂತ ನಡೆಯಲಿದ್ದು ಈ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಪೌರಕಾರ್ಮಿಕರೊಂದಿಗೆ ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕೋಟ್ಯಾನ್ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸಿದ್ದಾರೆ. 

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಬೈಕ್ ಸವಾರನ ದುರ್ಮರಣ

ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು ಅಸ್ಪೃಷ್ಯತೆ, ಅಸಮಾನತೆ ಸೇರಿದಂತೆ ಸಮಾಜದ ವಿವಿಧ ತೊಡಕುಗಳು ನಿವಾರಣೆಗಾಗಿ ಶ್ರಮಿಸಿದ ಧೀಮಂತ ನಾಯಕ ಅವರ ಆದರ್ಶಗಳನ್ನು ಸಮಾಜಕ್ಕೆ ಎತ್ತಿ ಹಿಡಿಯುವ ಸಲುವಾಗಿ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತಾಗಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗಿದೆ ಎಂದು ಸಂತೋಷ್ ಕೋಟ್ಯಾನ್ ತಿಳಿಸಿದ್ದಾರೆ.

ಇಂದು ಮುಂಜಾನೆ ಐದು ಗಂಟೆಯಿಂದ ಪೌರಕಾರ್ಮಿಕರೊಂದಿಗೆ ಸ್ವಚ್ಚತಾಕಾರ್ಯಕ್ಕಿಳಿದ ಅವರು ಚಿಕ್ಕಮಗಳೂರಿನ ಶಂಕರ್ ಪುರ ಬಡಾವಣೆಯಲ್ಲಿ ಪೌರಕಾರ್ಮಿಕರಂತೆಯೇ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಈ ಸ್ವಚ್ಛತಾ ಕಾರ್ಯದ ನಂತರದಲ್ಲಿ ಪೌರಕಾರ್ಮಿಕರೊಂದಿಗೆ ತೆರಳಿ ಸಾರ್ವಜನಿಕರಲ್ಲಿ ಪೌರಕಾರ್ಮಿಕರ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ.

ಯವಕರು ಈ ದೇಶದ ಭದ್ರ ಬುನಾದಿ, ಸಕ್ರಿಯವಾಗಿ ಯುವಜನತೆ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಪೌರಕಾರ್ಮಿಕರು ನಮ್ಮಹಿತಕ್ಕಾಗಿ ಸದಾ ಕಾರ್ಯ ನಿರ್ವಹಿಸುತ್ತಾರೆ, ಅವರೊಂದಿಗೆ ನಾವು ಕೆಲಸ ಮಾಡುವುದರಿಂದ ನೆಚ್ಚಿನ ಪೌರಕಾರ್ಮಿಕರಿಗೂ ಆತ್ಮಸ್ಥೈರ್ಯ ವೃದ್ಧಿಸುತ್ತದೆ ಹಾಗೂ ನೈರ್ಮಲ್ಯಯುತ ಸಮಾಜ ನಿರ್ಮಾಣವಾಗುತ್ತದೆ. ಪೌರ ಕಾರ್ಮಿಕರು ನಡೆಸುವ ಉತ್ತಮ ಕಾರ್ಯಗಳ ಕುರಿತು ಸಾರ್ವಜನಿಕರಲ್ಲಿ ನಾವು ಅರಿವು ಮೂಡಿಸಬೇಕು - ಸಂತೋಷ್ ಕೋಟ್ಯಾನ್, ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ 

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು ಪೌರ ಕಾರ್ಮಿಕರನ್ನು ಸಮಾಜ ನೋಡುತ್ತಿರುವ ದೃಷ್ಟಿಕೋನ ಬದಲಾಗಬೇಕು. ನಮ್ಮೆಲ್ಲರ ಸ್ವಚ್ಚ ಹಾಗೂ ನೈರ್ಮಲ್ಯಯುತ ಬದುಕಿಗೆ ಕಾರಣೀಕರ್ತರೇ ಪೌರಕಾರ್ಮಿಕರು ಅವರ ನಿಷ್ಕಲ್ಮಶ ಸೇವೆಯಿಂದ ಇಂದು ನಾವು ರೋಗಮುಕ್ತವಾದ ಜೀವನವನ್ನು ನಡೆಸುತ್ತಿದ್ದೇವೆ. ನಾವೂ ಕೂಡ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಅವರ ಕಾರ್ಯಕ್ಕೆ ಸಹಕಾರ ನೀಡಬೇಕು, ತನ್ಮೂಲಕ ಸ್ವಚ್ಚ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.  

ಈ ಸ್ವಚ್ಛತಾ ಕಾರ್ಯ ನಡೆಯುವ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀ ವರಸಿದ್ದಿ ವೇಣುಗೋಪಾಲ್ ಭೇಟಿ ನೀಡಿ ಸಂತೋಷ್ ಕೋಟ್ಯಾನ್ ಅವರ ಕಾರ್ಯವನ್ನು ಪ್ರಶಂಸೆ ಮಾಡಿದರು ಹಾಗೂ ಸಾರ್ವಜನಿಕರು ಈ ರೀತಿಯ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಕರೆ ನೀಡಿದರು. ಈ ಕಾರ್ಯಕ್ಕೆ ನಗರಸಭೆಯ ಸಿಬ್ಬಂದಿಗಳು ಸಹಕಾರ ನೀಡಿದರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.