ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ)  ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್  ಹರಿಹರಪುರದಲ್ಲಿ ವೈಭವದಿಂದ ನಡೆಯುತ್ತಿರುವ ಮಹಾ ಕುಂಭಾಭಿಷೇಕ ಮಹೋತ್ಸವಕ್ಕೆ ಮಸೀದಿಯ ಮುಂದೆ ಮುಸಲ್ಮಾನರು ಸ್ವಾಗತ ಕೋರುವ ಬ್ಯಾನರ್ ಗಳನ್ನು ಅಳವಡಿಸಿ ಶುಭ ಕೋರಿದ್ದಾರೆ. 

ರಾಜ್ಯಾದ್ಯಂತ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪಿನ ನಂತರದಲ್ಲಿ ಧರ್ಮಗಳ ನಡುವೆ ಸಂಘರ್ಷ ಉಂಟಾಗಿ ಅನ್ಯಧರ್ಮೀಯರೊಂದಿಗಿನ ವ್ಯಾಪಾರ ವಹಿವಾಟಿಗೆ ನಿಷೇಧ ಹೇರಬೇಕು ಹಿಂದೂಗಳ ಜಾತ್ರೆಯಲ್ಲಿ ಮುಸಲ್ಮಾನರ ಅಂಗಡಿಗಳಿಗೆ ನಿಷೇಧ ಹೇರಬೇಕು ಎಂಬೆಲ್ಲಾ ಅಭಿಯಾನಗಳು ಆರಂಭವಾಗಿತ್ತು. ಆದರೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ನಡೆಯುತ್ತಿರುವ ಮಹಾಕುಂಭಾಭಿಷೇಕ ಕಾರ್ಯಕ್ರಮಕ್ಕೆ  ಮಸೀದಿಯ ವತಿಯಿಂದ ಶುಭಾಶಯ ಕೋರುವ ಬ್ಯಾನರ್ ಹಾಕಲಾಗಿದೆ. ಈ ಮೂಲಕ ಸಮಾಜದಲ್ಲಿನ ಬಿರುಕು ಅಲ್ಪವಾಗಿ ಕ್ಷೀಣಗೊಂಡಂತೆ ತೋರುತ್ತಿದೆ. 







ಏಪ್ರಿಲ್ 10 ನೆಯ ತಾರೀಖಿನಿಂದ ಶ್ರೀ ಮಠದಲ್ಲಿ ಆರಂಭವಾದ ಈ ಮಹಾಕುಂಭಾಭಿಷೇಕ ಕಾರ್ಯಕ್ರಮವು ಏಪ್ರಿಲ್ 24 ರ ವರೆಗೆ ನಡೆಯಲಿದೆ. ಜಯಪುರ ಮಸೀದಿ ಕಮಿಟಿಯವರು ಅಳವಡಿಸಿರುವ ಈ ಬ್ಯಾನರ್ ನಲ್ಲಿ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಶ್ರೀಗಳ ಫೋಟೋ ಅಳವಡಿಸಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸ್ವಾಗತ ಕೋರಿದ್ದಾರೆ. ಇದೀಗ ಈ ಕುರಿತಾದ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು ಫೋಟೋ ಹರಿದಾಡುತ್ತಿದೆ. 

ಅದ್ಧೂರಿ ಕುಂಭಾಭಿಷೇಕ :

ಶ್ರೀ ಕ್ಷೇತ್ರ ಹರಿಹರಪುರ ಮಠದಲ್ಲಿ ಐತಿಹಾಸಿಕವಾಗಿ ನಡೆಯುತ್ತಿರುವ ವೈಭವದ ಮಹಾಕುಂಭಾಭಿಷೇಕದ ಅತ್ಯಂತ ಮುಖ್ಯ ದಿನವಾದ ಇಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಶಾರದಾ ದೇವಿಗೆ ಶ್ರೀಗಳಿಂದ ಮಹಾಕುಂಭಾಭಿಷೇಕ ನೆರವೇರಿತು. 

ದಿನಾಂಕ 10.04.2022 ರಂದು ಮಹಾ ಸಂಕಲ್ಪ ಹಾಗೂ ಬೃಹತ್ ಹೊರೆಕಾಣಿಕೆ ಸಮರ್ಪಣೆಯೊಂದಿಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಯುತ್ತಲಿದ್ದು ಮುಖ್ಯದಿನವಾದ ಇಂದು ಬೆಳಗ್ಗೆ  8.20 ರ ಶುಭ ವೃಷಭ ಲಗ್ನದಲ್ಲಿ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಹಾಗೂ ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪನೆ ಮಾಡಿರುವ ಶ್ರೀ ಶಾರದಾಂಬೆಗೆ ಮಹಾಕುಂಭಾಭಿಷೇಕ ನೆರವೇರಿಸಿದರು.

ಅಪಾರವಾದ ಭಕ್ತ ಸಮೂಹದೊಂದಿಗೆ ಇಂದು ಮಹಾಕುಂಭಾಭಿಷೇಕ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಇಂದು ಬೆಳಗ್ಗಿನಿಂದಲೇ ಧಾರ್ಮಿಕ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು ಮಂಗಳವಾದ್ಯಗಳೊಂದಿಗೆ ಕುಂಭ ಕಳಶಗಳನ್ನು ಶಾಸ್ತ್ರಬದ್ಧವಾಗಿ ತರಲಾಯಿತು. ಚಂಡೆಯ ಸದ್ದಿಗೆ ಶ್ರೀ ಮಠದ ಆವರಣದಲ್ಲಿ ಆನೆಯೂ ಹೆಜ್ಜೆ ಹಾಕಿದ್ದು ಭಕ್ತರ ಮನಸ್ಸಿಗೆ ಇನ್ನಷ್ಟು ಉತ್ಸಾಹ ಹಾಗೂ ಹೊಸತನದ ಭಾವನೆಯನ್ನು ನೀಡಿತು. ಶ್ರೀ ಹರಿಹರಪುರ ಮಠದಲ್ಲಿ ಪ್ರತಿಷ್ಠಾಪನೆಗೊಂಡಿರುವ 27 ಅಡಿ ಎತ್ತರದ ಶ್ರೀ ಇಷ್ಟ ಸಿದ್ದಿ ಭಕ್ತಾಂಜನೇಯ ಮೂರ್ತಿಗೆ ಹಾಗೂ ಮಠದ ಗೋಪುರಕ್ಕೆ ವಿಶೇಷ ಹೆಲಿಕಾಪ್ಟರ್ ನ ಮೂಲಕ ಪುಷ್ಪಾರ್ಚನೆ ನಡೆಯಿತು. ಮಠದ ಸುತ್ತಲೂ ಆವರಿಸಿದ್ದ ಭಕ್ತರು  ಈ ದೃಶ್ಯವನ್ನು ಕಂಡು ಆನಂದಿಸಿದರು. 

ನಿನ್ನೆ ಶ್ರೀ ಮಠದ ಆವರಣದಲ್ಲಿ ಮಹಾಕುಂಭಾಭಿಷೇಕದ ಪ್ರತಿಷ್ಠಾಂಗಪೂರ್ವ ವಿಧಿಗಳು ಸೇರಿದಂತೆ ಶ್ರೀ ಗುರು ದತ್ತಾತ್ರೇಯ ಮಹಾಯಾಗ ನಡೆದಿತ್ತು. ಇಂದು ಶ್ರೀಗಳ ಅಮೃತ ಹಸ್ತದಿಂದ ಮಹಾ ಕುಂಭಾಭಿಷೇಕ ನಡೆದಿದ್ದು ಭಕ್ತರು ಭಕ್ತಿ ಭಾವಗಳಿಂದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಹಾಗೂ ಶ್ರೀಗಳ ಕೃಪೆಗೆ ಪಾತ್ರರಾದರು. 

ಪ್ರತಿದಿನ ಸಂಜೆ ನಡೆಯಲಿದೆ ಸಾಂಸ್ಕೃತಿಕ ಕಾರ್ಯಕ್ರಮಗಳು : 

ಮಹಾ ಕುಂಭಾಭಿಷೇಕದ ಅಂಗವಾಗಿ ನಾಡಿನ ಪ್ರಖ್ಯಾತ ಕಲಾವಿದರಿಂದ ಪ್ರತಿ ದಿನ ಸಂಜೆ ಶ್ರೀ ಮಠದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನದೆಯುತಲಿದ್ದು ನೃತ್ಯರೂಪಕ, ಹಾಡುಗಾರಿಕೆ ಸೇರಿದಂತೆ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲಿವೆ. 

ಭಕ್ತ ಸಮೂಹ ಮತ್ತು ಗಣ್ಯರದಂಡು : ವೈಭವದ ಈ ಮಹಾತ್ಕಾರ್ಯಕ್ಕೆ ಒಂದೆಡೆ ದೇಶದ ರಾಜ್ಯದ ಅನೇಕ ಮೂಲಗಳ ಭಕ್ತ ಸಾಗರ ಹರಿದು ಬರುತ್ತಿದೆ ಬಂದ ಭಕ್ತರಿಗೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ಪೂರೈಸುವಲ್ಲಿ ಮಠ ಹೆಚ್ಚಿನ ಆದ್ಯತೆ ನೀಡಿ ಅವರನ್ನು ಸತ್ಕರಿಸುತ್ತಿದೆ. ಇನ್ನೊಂದೆಡೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಶ್ರೀ ಮಠಕ್ಕೆ ಆಗಮಿಸುತ್ತಿದ್ದಾರೆ.