ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದಲ್ಲಿ ಭೀಕರವಾಗಿ ಹತ್ಯೆಗೀಡಾಗಿದ್ದ ಮೃತ ಹರ್ಷನ ಸಹೋದರಿ ಅಶ್ವಿನಿ ಶಿವಮೊಗ್ಗದಲ್ಲಿ ಹತ್ಯೆಗೀಡಾದ ಇನ್ನೋರ್ವ ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಅವರ ಪುತ್ರನ ವಿದ್ಯಾಭ್ಯಾಸಕ್ಕೆ ಆಸರೆಯಾಗುವುದಾಗಿ ಕುಟುಂಬ ವರ್ಗದಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ 2015ರ ಫೆಬ್ರವರಿ 19 ರಂದು ನಡೆದ ಪಿಎಫ್‍ಐ ಮೆರವಣಿಗೆ, ಸಮಾವೇಶ ಹಾಗೂ ಈ ಸಂದರ್ಭದಲ್ಲಿ ಉಂಟಾದ ಗಲಭೆಯಲ್ಲಿ ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ವಿಶ್ವನಾಥ್ ಅವರ ಸಾವಿನ ನಂತರದಲ್ಲಿ ಅವರ ಪತ್ನಿಯೂ ಕೂಡಾ ಮೃತಪಟ್ಟಿದ್ದರು. ವಿಶ್ವನಾಥ್ ಶೆಟ್ಟಿ ಅವರ ಪುತ್ರ ಯಶಸ್ ತಂದೆ-ತಾಯಿಯರನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಅಜ್ಜಿಗೂ ಕೂಡ ವಯಸ್ಸಾದ ಕಾರಣ ಅವನನ್ನು ವಿಶ್ವನಾಥ್ ಶೆಟ್ಟಿಯವರ ಪತ್ನಿಯ ತಂಗಿ ಕೂಲಿ ಕೆಲಸ ಮಾಡಿಕೊಂಡು ಇಬ್ಬರನ್ನು ಸಾಕುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡು ಕುಟುಂಬ ನಿರ್ವಹಣೆ ಅತ್ಯಂತ ಕಷ್ಟಸಾಧ್ಯವಾಗಿತ್ತು.

ಮೃತ ವಿಶ್ವನಾಥ್ ಶೆಟ್ಟಿಯವರ ಪುತ್ರ ಯಶಸ್ ವಾಸವಿರುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮನೆಗೆ ಭೇಟಿ ನೀಡಿದ ಅಶ್ವಿನಿ ಅವರು ಯಶಸ್ ನ ವಿದ್ಯಾಭ್ಯಾಸ ಸೇರಿದಂತೆ ಅವನ ಮುಂದಿನ ಭವಿಷ್ಯಕ್ಕಾಗಿ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. 

ನನ್ನ ತಮ್ಮ ಹರ್ಷನನ್ನು ಯಶಸ್ ನಲ್ಲಿ ಕಾಣುತ್ತೇನೆ, ನನಗೂ ಒಬ್ಬಳು ಮಗಳಿದ್ದಾಳೆ ಅವಳು 9ನೇ ತರಗತಿ ಓದುತ್ತಿದ್ದಾಳೆ ಯಶಸ್ ಎಂಟನೇ ತರಗತಿ ಓದುತ್ತಿರುವ ನನ್ನ ಇನ್ನೋರ್ವ ಪುತ್ರ ಎಂದು ಭಾವಿಸುತ್ತೇನೆ ಎಂದರು.

ಜೀವನ ನಿರ್ವಹಣೆ ಮಾಡಲು ಒದ್ದಾಡುತ್ತಿರುವ ಬಡತನ ಹೊಂದಿರುವ ಕುಟುಂಬಕ್ಕೆ ಆಸರೆಯಾಗಿ ಅಶ್ವಿನಿ ಅವರು ನಿಲ್ಲುವ ಭರವಸೆನೀಡಿರುವ ಕಾರಣ ಕುಟುಂಬ ಕಿಂಚಿತ್ತಿನ ಸಮಾಧಾನ ಕಂಡಿದೆ.