ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಾದ್ಯಂತ ಅಕ್ರಮ ನಡೆಸುವ ಅಧಿಕಾರಿಗಳ ವಿರುದ್ಧ ಸೂಕ್ತ ಹಾಗೂ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಚಿಕ್ಕಮಗಳೂರಿನ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದ ಹಕ್ಕುಪತ್ರ ಹಗರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಅಕ್ರಮ ಎಸಗುವವರನ್ನು ಎಂದಿಗೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಶೃಂಗೇರಿ ಹಕ್ಕುಪತ್ರ ಹಗರಣದ ಕುರಿತಾಗಿ ತನಿಖೆಗಿಳಿದಿರುವ ಉಪವಿಭಾಗಾಧಿಕಾರಿ ಡಾ. ಎಚ್ ಎಲ್ ನಾಗರಾಜ್ ಅವರ ನೇತೃತ್ವದ ತಂಡ ಕುಲಂಕುಶವಾಗಿ ಕುರಿತು ಪರಿಶೀಲನೆ ನಡೆಸುತ್ತಿದ್ದು ಅಕ್ರಮವಾಗಿ ಯಾವುದಾದರೂ ಹಕ್ಕುಪತ್ರಗಳನ್ನು ನೀಡಿದ್ದರೆ ಅವುಗಳನ್ನು ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹಾಗೂ ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. 

ಅಕ್ರಮವಾಗಿ ನೀಡಿರುವ ಹಕ್ಕುಪತ್ರಗಳನ್ನು ರದ್ದು ಮಾಡುವುದು ಒಂದೆಡೆಯಾದರೆ ಇನ್ನೊಂದೆಡೆ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸುವುದಾಗಿ ತಿಳಿಸಿದ್ದಾರೆ. ತನಿಖೆಯಿಂದ ಹೊರಬಂದ ಅಂಶಗಳನ್ನು ಮತ್ತೊಮ್ಮೆ ನ್ಯಾಯಾಲಯದ ಗಮನಕ್ಕೆ ತಂದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. 

5 ಎಕರೆಗಿಂತಲೂ ಅಧಿಕವಾಗಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರ ಭೂಮಿಯನ್ನು ಹಿಂಪಡೆದು ಸಣ್ಣ ಪ್ರಮಾಣದ ರೈತರಿಗೆ ಬಡವರ್ಗದವರಿಗೆ ನೀಡುವಂತಹ ಪ್ರಯತ್ನ ನಡೆಯಬೇಕಿದೆ ಈ ನಿಟ್ಟಿನಲ್ಲಿ ಹೊಂದಿರುವ ಮಾಹಿತಿಯನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ನೀಡಬಹುದು ಎಂದು ಅವರು ತಿಳಿಸಿದರು.