ಸೊರಬ: (ನ್ಯೂಸ್ ಮಲ್ನಾಡ್ ವರದಿ) ಕೃಷಿಕರೋರ್ವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಸೊರಬದಲ್ಲಿ ಬೆಳಕಿಗೆ ಬಂದಿದೆ. 

ಶಿವಮೊಗ್ಗ ಜಿಲ್ಲೆಯ ಸೊರಬದ ಎಣ್ಣೆಕೊಪ್ಪ ಗೊಲ್ಲರ ತಾಂಡದ ಬಂಗಾರಪ್ಪ ಗಿಡ್ಡ ತಿಮ್ಮಣ್ಣ ಎಂಬ ವ್ಯಕ್ತಿಯ ಮೇಲೆ ಕೃಷಿ ಕಾರ್ಯದ ನಿಮಿತ್ತವಾಗಿ ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಳೆ ಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಗೀಡಾಗದೆ ಗಾಯಗಳಾಗಿದ್ದು ಕೂಡಲೆ ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. 

ಈ ಸಂಬಂಧ ಆನವಟ್ಟಿ ವ್ಯಾಪ್ತಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆತಂಕಗೊಂಡಿರುವ ಗ್ರಾಮಸ್ಥರು ಆದಷ್ಟು ಶೀಘ್ರವಾಗಿ ಚಿರತೆಯನ್ನು ಹಿಡಿಯಬೇಕೆಂದು ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.

ಸಾಕು ನಾಯಿಗಳಿಂದ ಉಳಿದ ಪ್ರಾಣ : 

ಚಿರತೆ ದಾಳಿ ನಡೆಸುವ ಸಂದರ್ಭದಲ್ಲಿ ಗಿಡ ತಿಮ್ಮಣ್ಣ ಅವರೊಂದಿಗೆ ಸಾಕುನಾಯಿಗಳೂ ಇದ್ದು ಚಿರತೆ ದಾಳಿ ನಡೆಸುವ ಸಂದರ್ಭದಲ್ಲಿ ನಾಯಿಗಳು ಜೋರಾಗಿ ಬೊಗಳಿದ್ದು ನಾಯಿ ಬೊಗಳುವ ಶಬ್ದಕ್ಕೆ ಚಿರತೆ ಅಲ್ಲಿಂದ ವಾಪಸ್ಸಾಗಿದೆ. ಆದಷ್ಟು ಶೀಘ್ರವಾಗಿ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಆತಂಕದಲ್ಲಿರುವ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೋರಿದ್ದಾರೆ.