ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಅದ್ಧೂರಿ ಹಾಗೂ ಅತ್ಯಂತ ಸಡಗರದಿಂದ ಹರಿಹರಪುರ ಶ್ರೀ ಮಠದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಇಂದು ಲಕ್ಷ ಮೋದಕ ಗಣಪತಿ ಮಹಾಯಾಗ ನಡೆಯಿತು. 

ಇದನ್ನೂ ಓದಿ: ಶೃಂಗೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ನಿಶ್ಮಿತ ಬಸ್ ಪಲ್ಟಿ ! 20 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಮಠದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ವೈಭವದ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭಾಭಿಷೇಕದ ಅಂಗವಾಗಿ ಇಂದು ಲಕ್ಷ ಮೋದಕ ಗಣಪತಿ ಮಹಾಯಾಗ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ನಾಳೆ 18.04.2022 ರಂದು ಸಹಸ್ರ ಚಂಡಿಕಾ ಮಹಾಯಾಗದ ಸಂಕಲ್ಪ, ಕೋಟಿ ಕುಂಕುಮಾರ್ಚನೆಯ ಮಹಾಸಂಕಲ್ಪ, ಮಹಾ ಮೃತ್ಯುಂಜಯಯಾಗ, ಸಹಸ್ರ ಚಂಡಿಕಾ ಮಹಾಯಾಗದ ಪಾರಾಯಣ ಪ್ರಾರಂಭವಾಗಲಿದೆ. ಸಹಸ್ರ ಚಂಡಿಕಾ ಮಹಾಯಾಗದ  ಪೂರ್ಣಾಹುತಿಯ ದಿನವಾದ ಶುಕ್ರವಾರದಂದು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಆಗಮಿಸುವ ನಿರೀಕ್ಷೆಯಿದೆ. ಪ್ರತೀದಿನ ಮದ್ಯಾಹ್ನ 11 ಗಂಟೆಗೆ ಧಾರ್ಮಿಕ ಸಭೆ ನಡೆಯುತಲಿದೆ. 


ಇಂದು ವಿದುಷಿ ಡಾ. ಪಂತುಲು ರಮಾ ಮತ್ತು ವೃಂದದ ವತಿಯಿಂದ ಹಾಡುಗಾರಿಕೆ ನಡೆಯಿತು. ಪ್ರತಿದಿನವೂ ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿ ನಡೆಯುತಲಿದ್ದು ಈ ಕಾರ್ಯಕ್ರಮವನ್ನು ಸವಿಯಲು ಬಂದವರು ಕಾರ್ಯಕ್ರಮದ ವೀಕ್ಷಣೆಮಾಡಿ ತೃಪ್ತ ಮನೋಭಾವನೆಯಿಂದ ತೆರಳುತ್ತಿದ್ದಾರೆ. 

ದೇಶದ, ರಾಜ್ಯದ ವಿವಿಧ ಕಡೆಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಹಾಗೂ ತಂಗಲು ರೂಮಿನ ವ್ಯವಸ್ಥೆಯನ್ನು ಶ್ರೀ ಮಠದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ಒಟ್ಟಾರೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದಸಾಗಿದ್ದು ಇನ್ನೂ ಒಂದು ವಾರಗಳ ಕಾಲ ಅದ್ಧೂರಿಯಾಗಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿದೆ.


ಶ್ರದ್ಧಾ ಭಕ್ತಿಯಿಂದ ಜರುಗಿದ ಕೋಟಿ ತುಳಸಿ ಅರ್ಚನೆ :

ಮಲೆನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದಲ್ಲಿ ಅತ್ಯಂತ ವೈಭವದಿಂದ ಮಹಾಕುಂಭಾಭಿಷೇಕದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಅಂತೆಯೇ ಇಂದು ಶ್ರೀ ಲಕ್ಷ್ಮೀನೃಸಿಂಹ ದೇವರಿಗೆ ಸಹಸ್ರನಾಮ ಪಾರಾಯಣದ ಮೂಲಕ ಕೋಟಿ ತುಳಸಿ ಅರ್ಚನೆ ನಡೆಯಿತು ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಮಹಾಯಾಗ ನಡೆಯಿತು. 


ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಹಾಗೂ ಲಕ್ಷ್ಮೀ ನೃಸಿಂಹ ದೇವರ ಕೃಪೆಗೆ ಪಾತ್ರರಾದರು. 

ಈ ಬೃಹತ್ ಕುಂಭಾಭಿಷೇಕ ಮಹೋತ್ಸವಕ್ಕೆ ಆಗಮಿಸುವ ಸರ್ವರಿಗೂ ಶ್ರೀ ಮಠದ ವತಿಯಿಂದ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು ಬೆಳಗ್ಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಸಂಜೆಯ ವೇಳೆಯಲ್ಲಿ ನಡೆಯುವ ಸಾಂಸ್ಕತಿಕ ಕಾರ್ಯಕ್ರಮಗಳಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಊರುಗಳ ಜನರು, ಸ್ಥಳೀಯರು ಭಾಗವಹಿಸಿ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.


ವಿಶೇಷವಾಗಿ ಈ ಕುಂಭಾಭಿಷೇಕ ಮಹೋತ್ಸವದಲ್ಲಿ ಪ್ರತಿದಿನ 11 ಗಂಟೆಯ ಸಮಯದಲ್ಲಿ ಧಾರ್ಮಿಕ ಸಭೆಯು ಆಯೋಜನೆಗೊಂಡಿದ್ದು ಈ ಸಭೆಯಲ್ಲಿ ಭಕ್ತರು ಭಾಗವಹಿಸಿ ಹಿಂದೂ ಸನಾತನ ಧರ್ಮದ ಮಹತ್ವದ ಕುರಿತು ತಿಳಿಸುವ ವಿಚಾರಗಳನ್ನು ಮನನ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ಸಂಜೆ ಪ್ರಖ್ಯಾತ ಕಲಾವಿದರಾದ ವಿದ್ವಾನ್ ಶ್ರೀ ಸತ್ಯನಾರಾಯಣ ರಾಜು ಮತ್ತು ತಂಡದ ವತಿಯಿಂದ ನೃತ್ಯ ರೂಪಕ ನಡೆಯಿತು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಅತ್ಯಂತ ಆಕರ್ಷಣೀಯವಾಗಿದ್ದ ಈ ಕಾರ್ಯಕ್ರಮವನ್ನು ಸವಿದರು.