ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಇಲಾಖೆಯ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿರುವ ದುರ್ಘಟನೆ ಸಂಭವಿಸಿದೆ. 

ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶ್ರೀ ಮಠ ಹಾಗೂ ಹರಿಹರಪುರ ಮಠಕ್ಕೆ ಸಿಎಂ ಆಗಮನದ ಹಿನ್ನೆಲೆ ಇಲಾಖೆಯ ಅನೇಕ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು ಅದರಂತೆಯೇ ನರಸಿಂಹರಾಜಪುರದ ಅರಣ್ಯ ಇಲಾಖೆಯ ಬೊಲೆರೋ ವಾಹನವನ್ನು ಕೂಡ ಬಳಸಿಕೊಳ್ಳಲಾಗಿತ್ತು. 


ವಾಹನಕ್ಕೆ ಇಂಧನ ಪೂರೈಕೆ ಮಾಡಿಕೊಂಡು ಕೊಪ್ಪದ ಕಡೆಗೆ ತೆರಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅಡಿಕೆ ತೋಟಕ್ಕೆ ಉರುಳಿದೆ, ಪರಿಣಾಮ ವಾಹನ ಚಾಲಕನ ತಲೆಯ ಭಾಗಕ್ಕೆ ಗಾಯವಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 


ಇದನ್ನೂ ಓದಿ:

ಮಲೆನಾಡಿನ ಉದ್ಯೋಗಾಕಾಂಕ್ಷಿಗಳಿಗಾಗಿ ಬೃಹತ್ ಉದ್ಯೋಗ ಮೇಳ :

ಕೊರೋನ ಅವಧಿಯ ನಂತರದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಿ ಮಲೆನಾಡಿನ ಯುವಕ-ಯುವತಿಯರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದ್ದ ಉದ್ಯಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಅವರು ಉದ್ಯೋಗ ಮೇಳ ಆಯೋಜನೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.


ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತುಮಖಾನೆಯಲ್ಲಿ ಮೇ ತಿಂಗಳ ಎಂಟನೇ ತಾರೀಕಿನಂದು ಈ ಭಾಗದ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಬೃಹತ್ ಉದ್ಯೋಗ ಮೇಳದ ಆಯೋಜನೆ ಮಾಡಿರುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಅವರು ತಿಳಿಸಿದ್ದಾರೆ.

ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಚಿಕ್ಕಮಗಳೂರು ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಗಳ ಜೊತೆಗೂಡಿ ಶೃಂಗೇರಿ ಕೊಪ್ಪ ನರಸಿಂಹರಾಜಪುರ ತಾಲೂಕುಗಳ ಪ್ರತಿಭಾವಂತರಿಗೆ ಉದ್ಯೋಗ ಮೇಳದ ಆಯೋಜನೆ ಗೊಳಿಸಿ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವುದಾಗಿ ತಿಳಿಸಿದರು. 


ಈ ಉದ್ಯೋಗ ಮೇಳದಲ್ಲಿ 80ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಮೂರು ಸಾವಿರಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ನೀಡಲಿದ್ದು ಮಲೆನಾಡಿನ ಯುವಜನತೆ ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದರು.

ಹತ್ತನೇ ತರಗತಿ ಉತ್ತೀರ್ಣರಾದವರಿಂದ ಉನ್ನತ ಪದವಿ ಸ್ನಾತಕೋತ್ತರ ಪದವಿ ಪಡೆದವರವರೆಗೆ ಈ ಉದ್ಯೋಗ ಮೇಳದಲ್ಲಿ ಅವಕಾಶಗಳು ಲಭ್ಯವಿದ್ದು ಆಸಕ್ತರು ಈ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆಯಬಹುದಾಗಿದೆ.