ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಉಂಟಾಗಿರುವ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನು ಖಂಡಿಸಿ ಇಂದು ಚಿಕ್ಕಮಗಳೂರಿನಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು. 

ಇದನ್ನೂ ಓದಿ : ಜಯಪುರ : ಭೀಕರ ರಸ್ತೆ ಅಪಘಾತ ; ಓರ್ವ ಮಹಿಳೆ ಸಾವು ಇನ್ನೋರ್ವ ವ್ಯಕ್ತಿಯ ಸ್ಥಿತಿ ಗಂಭೀರ

ಚಿಕ್ಕಮಗಳೂರಿನ ಅಜಾದ್ ವೃತ್ತದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ನಾಯಕರಾದ ಎಸ್ ಎಲ್ ಭೋಜೆಗೌಡ ಅವರ ಸಮ್ಮುಖದಲ್ಲಿ ಈ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜನರು ದಿನನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿರುವುದು ಸರ್ಕಾರದ ದೌರ್ಜನ್ಯವಾಗಿದೆ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೇಳೆಕಾಳು, ಅಡುಗೆ ಎಣ್ಣೆ ಸೇರಿದಂತೆ ದಿನನಿತ್ಯ ಉಪಯೋಗಿಸುವ ವಸ್ತುಗಳ ಮೇಲಿನ ಬೆಲೆಯನ್ನು ನಿಯಂತ್ರಣ ಮಾಡಬೇಕು ದಿನವೂ ಹೆಚ್ಚಿಸಬಾರದು ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು. 

ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೆಗೌಡ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಎಲ್ಲರನ್ನೂ ಒಂದೆಡೆ ಕೊಂಡೊಯ್ಯಬೇಕಾಗಿರುವ ಸರ್ಕಾರ ಕೇವಲ ಧರ್ಮದ ಆಧಾರಿತವಾಗಿ ಅಧಿಕಾರ ಸಾಧಿಸುತ್ತಾ ಬೆಲೆ ಏರಿಕೆಯ ವಿರುದ್ಧ ಮೌನ ವಹಿಸಿರುವುದು ಅತ್ಯಂತ ಖಂಡನಾರ್ಹ. ತಮ್ಮ ಹಾದಿಯೇ ಸರಿ, ನಾವು ಮಾಡುತ್ತಿರುವ ಕಾರ್ಯವೇ ಸರಿ ಎಂದು ಪ್ರತಿಪಾದನೆ ಮಾಡುತ್ತಾ ಧರ್ಮದ ಆಧಾರದ ಮೇಲೆ ಜಾತಿ ಜಾತಿಗಳ ನಡುವೆ ಬಿರುಕುಂಟುಮಾಡಿ ಅಧಿಕಾರ ನಡೆಸುತ್ತಿರುವುದು ಸರಿಯಾದ ನಡೆಯಲ್ಲ ಎಂದು ಹರಿಹಾಯ್ದರು. 

ಗೋ ಮೂತ್ರದಿಂದ ಮಹಾತ್ಮ ಗಾಂಧೀಜಿ ಭಾವಚಿತ್ರ ಶುದ್ಧೀಕರಣ : 
ಈ ಪ್ರತಿಭಟನೆಯ ಸಂದರ್ಭದಲ್ಲಿ ಗಾಂಧೀಜಿ ಅವರ ಭಾವಚಿತ್ರವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುವ ಪ್ರಕ್ರಿಯೆಯನ್ನೂ ಜೆಡಿಎಸ್ ಮುಖಂಡರು ನಡೆಸಿದರು. 

ಗುಜರಾತ್ ನ ಅಹಮದಾಬಾದ್ ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಬರಮತಿ ಆಶ್ರಮಕ್ಕೆ ಇತ್ತೀಚೆಗಷ್ಟೇ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ ಗಾಂಧೀ ಚರಕದ ಮುಂದೆ ನೂಲು ನೇಯುವ ರೀತಿಯಲ್ಲಿ ಚಿತ್ರ ತೆಗಿಸಿಕೊಂಡಿದ್ದರು, ಈ ಚಿತ್ರವು ಎಲ್ಲೆಡೆ ವೈರಲ್ ಆಗಿತ್ತು. 

ಈ ಕುರಿತು ಮಾತನಾಡಿದ ಎಸ್ ಎಲ್ ಭೋಜೆಗೌಡ ಅವರು ಸದಾ ಕೋಮು ಪ್ರಚೋದನೆ ನೀಡುತ್ತಾ, ಜಾತಿ ಧರ್ಮದ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಮನಸ್ತಿತಿ ಹೊಂದಿರುವ ಸಂಸದ ತೇಜಸ್ವಿ ಸೂರ್ಯ ಅವರು ಗಾಂಧೀಜಿ ಚರಕಮುಟ್ಟಿ ಅದನ್ನು ಅಪವಿತ್ರಗೊಳಿಸಿದ್ದಾರೆ ಆದ ಕಾರಣ ಇಂದು ಪರಿಶುದ್ಧ ಮಾಡಲಾಗಿದೆ. ಅವರ ಆಚರಣೆಗಳಿಗೆ ನಂಬಿಕೆಗೆ ವಿರುದ್ಧವಾಗಿ ವರ್ತಿಸುವ ವ್ಯಕ್ತಿ ಮಹಾತ್ಮ ಗಾಂಧೀಜಿಗೆ ಅಪಮಾನ ಮಾಡಿದ್ದಾರೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು.

ಈ ಪ್ರತಿಭಟನೆಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಭೋಜೆಗೌಡ, ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಹೊಲದ ಗದ್ದೆ ಗಿರೀಶ್ ಚಂದ್ರಪ್ಪ, ದೇವಿ ಪ್ರಸಾದ್, ಮಂಜಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.