ಕಳಸ : (ನ್ಯೂಸ್ ಮಲ್ನಾಡ್ ವರದಿ) ಈ ಹಿಂದಿನ ತಲೆಮಾರಿನವರು ಹೆಚ್ಚಾಗಿ ಪತ್ರಮುಖೇನ ಸಂವಹನ ನಡೆಸುತ್ತಿದ್ದರು, ಕಾಲಕ್ರಮೇಣ ಮೊಬೈಲ್ ಎಲ್ಲೆಡೆ ವ್ಯಾಪಿಸುತ್ತಿದ್ದಂತೆ ಪತ್ರ ಬಳಕೆಯು ಕೇವಲ ಕೆಲವೊಂದು ಸಂದರ್ಭದಲ್ಲಿ ಮಾತ್ರ ನಡೆಯುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ಮನುಷ್ಯರೊಡನೆ ಸಂವಹನ ಮಾಡಲು ಪತ್ರ ಬರೆಯದೆ ದೇವರಿಗೆ ಪತ್ರ ಬರೆದು ತಮಗಿರುವ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸದ ಶ್ರೀ ಕಳಸೇಶ್ವರ ಸ್ವಾಮಿಯ ದೇಗುಲದ ಕಾಣಿಕೆ ಹುಂಡಿಯಲ್ಲಿ ಮುಜರಾಯಿ ಇಲಾಖೆಯ ಸಿಬ್ಬಂದಿಗೆ ಈ ಪತ್ರ ದೊರೆತಿದ್ದು ತನ್ನ ಕುಟುಂಬ ವರ್ಗಕ್ಕೆ ಒಳಿತನ್ನು ಮಾಡುವ ಎಂಬುವ ರೀತಿಯಲ್ಲಿ ದೇವರಿಗೆ ಮೊರೆಯನ್ನಿಟ್ಟು ವ್ಯಕ್ತಿ ಪತ್ರ ಬರೆದಿದ್ದಾರೆ.

ನನ್ನ ಮಗನಾದ ಲಕ್ಷ್ಮೀಶನಿಗೆ ಅವನ ಇಚ್ಛೆಯಂತೆ ಉತ್ತಮ ಕೆಲಸ ದೊರೆಯುವಂತೆ ಮಾಡು, ಕುಡಿಯುವ ಚಟ ಬಿಡಿಸುವ, ದುಶ್ಚಟಗಳ ಮೇಲೆ ಮನಸ್ಸು ಬಾರದಂತೆ ಮಾಡು, ಕೋಪ ಹಾಗೂ ಚಂಚಲ ಸ್ವಭಾವವನ್ನು ನಾಶಮಾಡು, ಭಯ ನಿವಾರಣೆ ಮಾಡು, ಸಂಸಾರದಲ್ಲಿ ಜವಾಬ್ದಾರಿ ಕೊಡು ದೊಡ್ಡವರ ಮಾತಿಗೆ ವಿರುದ್ಧವಾಗಿ ಮಾತನಾಡದಂತೆ ಮಾಡು, ಉತ್ತಮವಾದ ಬುದ್ದಿ ಕೊಟ್ಟು ಒಳ್ಳೆಯ ಶಕ್ತಿ ಕೊಡು, ದೃಢಮನಸ್ಸನ್ನು ಕೊಡು. ನನ್ನ ಮಗಳಿಗೆ ವಯಸ್ಸಿಗೆ ತಕ್ಕ ಬುದ್ಧಿ ಕೊಡು, ಅವಳ ಜೀವನ ಉತ್ತಮವಾಗಿರುವಂತೆ ಮಾಡು, ಆರೋಗ್ಯ ಭಾಗ್ಯ, ಕೀರ್ತಿ, ಯಶಸ್ಸು ಕರುಣಿಸು, ನೆಮ್ಮದಿ ಲಭಿಸುವಂತೆ ಮಾಡು, ಮನೆ ಕಟ್ಟಲು ಅನುಕೂಲ ಮಾಡು ಎಂದು ದೇವರಿಗೆ ಪತ್ರ ಬರೆದು ಬೇಡಿಕೊಂಡಿದ್ದಾರೆ.

ಮನೆಯ ವ್ಯಕ್ತಿಯೋರ್ವರು ಕುಟುಂಬದ ಎಲ್ಲರ ಒಳಿತಿಗಾಗಿ ಹಾಗೂ ಅವರ ಕ್ಷೇಮಕ್ಕಾಗಿ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ದೇವರಲ್ಲಿ ವಿಭಿನ್ನವಾಗಿ ಪ್ರಾರ್ಥಿಸಿ ರುವುದು ಇದೀಗ ಎಲ್ಲೆಡೆ ಹೆಚ್ಚಿನ ಚರ್ಚೆಯಲ್ಲಿದೆ. 

ಈ ಪತ್ರದ ಪೂರ್ಣ ಸಾರಾಂಶ ನೋಡಿದಾಗ ಕುಟುಂಬದ ಸಕಲರಿಗೂ ಒಳ್ಳೆಯ ಹಾದಿ ಹಾಗೂ ಉತ್ತಮ ಭವಿಷ್ಯ ನೀಡು ಎಂಬ ಕುಟುಂಬದ ಹಿರಿಯರ ಭಾವನೆ ವ್ಯಕ್ತವಾಗುತ್ತದೆ.