ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಜನರು ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಸವಿಸ್ತಾರ ಚರ್ಚೆ ಹಾಗೂ ಗಂಭೀರ ಸಮಸ್ಯೆಗಳ ಕುರಿತಾದ ಚಿಂತನ ಮಂಥನ ಕುರಿತಾಗಿ ಮಲೆನಾಡು ಪ್ರಾಂತ್ಯದ ಪ್ರಥಮ ಸಮ್ಮೇಳನ ನಾಳೆ ಶೃಂಗೇರಿಯಲ್ಲಿ ನಡೆಯಲಿದೆ.
ಮಲೆನಾಡು ಭಾಗವಾದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಜನರನ್ನೊಳಗೊಂಡ ಸಮ್ಮೇಳನ ಇದಾಗಿದ್ದು ಕಾರ್ಮಿಕರ ದಿನಾಚರಣೆಯ ದಿನವಾದ ಮೇ 1 ರಂದು (ನಾಳೆ) ಈ ಸಮ್ಮೇಳನವು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರ ವರೆಗೆ ನಡೆಯಲಿದೆ. ಈ ಸಭೆಯ ಆಯೋಜನೆಯನ್ನು ಜನಶಕ್ತಿ ಸಂಘಟನೆ ಮಾಡಿದೆ.
ಈ ಸಭೆಯಲ್ಲಿ ಮುಖ್ಯವಾಗಿ ಅನೇಕ ಸಮಯಗಳಿಂದ ಮಲೆನಾಡು ಭಾಗದ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದ ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ, ಜಮೀನು ಹಾಗೂ ಸಾಗುವಳಿ ಚೀಟಿ ನೀಡಲು ಆಗುತ್ತಿರುವ ವಿಳಂಬ, ಗೋಮಾಳವನ್ನು ಖಾಸಗೀಯವರಿಗೆ ನೀಡಲು ಆಗುತ್ತಿರುವ ವಿಳಂಬದ ಕುರಿತು ಹಾಗೂ ಇನ್ನಿತರ ಮುಖ್ಯ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾಧಿಕಾರಿಗಳಾದ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶಶಿಕಾಂತ್ ಸೆಂದಿಲ್, ಪ್ರಖ್ಯಾತ ಚಿಂತಕರಾದ ಶಿವಸುಂದರ್, ಮಾಜಿ ಸಚಿವರು ಮತ್ತು ಸಾಮಾಜಿಕ ಹೋರಾಟಗಾರರಾದ ಬಿ.ಟಿ ಲಲಿತಾನಾಯಕ್, ಜನಶಕ್ತಿ ಸಂಘಟನೆಯ ರಾಜ್ಯ ಗೌರವಾಧ್ಯಕ್ಷರಾದ ಗೌರಿ, ಪರಿಸರ ಹೋರಾಟಗಾರರಾದ ಕಲ್ಕುಳಿ ವಿಠ್ಠಲ್ ಹೆಗ್ಡೆ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿಯಾದ ಕೆ.ಎಲ್ ಅಶೋಕ್, ರಾಜ್ಯ ಗೌರವಾಧ್ಯಕ್ಷರಾದ ಗೌಸ್ ಮೊಹಿದ್ದೀನ್ ಆಗಮಿಸಲಿದ್ದಾರೆ.





0 Comments