ಜಯಪುರ : (ನ್ಯೂಸ್ ಮಲ್ನಾಡ್ ವರದಿ) ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಅಚಾನಕ್ಕಾಗಿ ನಾಯಿ ರಸ್ತೆಗೆ ಅಡ್ಡ ಬಂದ ಕಾರಣ ಕಾರು ಮರಕ್ಕೆ ಗುದ್ದಿ ಓರ್ವ ಮಹಿಳೆ ಭೀಕರವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ : ಚಿರತೆ ದಾಳಿಗೆ ತುತ್ತಾದ ಕೃಷಿಕ ; ಸಾಕುನಾಯಿಗಳಿಂದ ಉಳಿದ ಪ್ರಾಣ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಕಟ್ಟೆಮನೆ ಸಮೀಪ ಈ ವಾಹನ ಅಪಘಾತ ನಡೆದಿದ್ದು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ನಾಯಿ ಅಡ್ಡ ಬಂದ ಕಾರಣ ನಾಯಿಯನ್ನು ಬಚಾವ್ ಮಾಡುವ ಸಲುವಾಗಿ ಕಾರಿನ ಚಾಲಕ ಕಾರನ್ನು ಬದಿಗೆ ತರುವ ಸಂದರ್ಭದಲ್ಲಿ ಆತನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಲತಃ ಮೂಡಿಗೆರೆಯ ನಿವಾಸಿಗಳಾದ ತಂದೆ ತಾಯಿ ಹಾಗೂ ಮಗ ವಾಹನದಲ್ಲಿದ್ದು ತಾಯಿಗೆ ಔಷಧಿ ತರುವ ಸಲುವಾಗಿ ಮಾವಿನಕಟ್ಟೆಗೆ ಕರೆದುಕೊಂಡು ಹೋಗಿ ಹಿಂದಿರುಗುವಾಗ ಈ ಘಟನೆ ನಡೆದಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ದುರ್ಮರಣವನ್ನಪ್ಪಿದ್ದಾರೆ.
ವಾಹನದಲ್ಲಿದ್ದವರನ್ನು ಮನೋಹರ್, ಜಯಲಕ್ಷ್ಮಿ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಅವರನ್ನು ಕೊಪ್ಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜಯಲಕ್ಷ್ಮಿ ಅವರನ್ನು ಹಾಗೂ ಅವರ ಪತಿಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಜಯಲಕ್ಷ್ಮಿ ಅವರು ಸಾವನ್ನಪ್ಪಿದ್ದು ಮನೋಹರ್ ಅವರ ಪರಿಸ್ಥಿತಿ ಗಂಭೀರವಾಗಿದೆ.





0 Comments