ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸರಕಾರಿ ಬಸ್ ಹಾಗೂ ಕಾರ್ ನಡುವೆ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.
ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಸರಕಾರಿ ಬಸ್ ಹಾಗೂ ಡಸ್ಟರ್ ಕಾರ್ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು ಗಾಯಗೊಂಡಿರುವ ವಾಹನದ ಚಾಲಕ ಪ್ರತೀಕ್, ರಾಜೇಶ್ ಬೆಳ್ಳಿವರಿ ಹಾಗೂ ಸ್ವಂತಿಕಾ ಬೆಳ್ಳಿವರಿ ಅವರನ್ನು ಕಕ್ಕಿಂಜೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸರ್ಕಾರಿ ರಜೆಯಿದ್ದ ಕಾರಣ ಅನೇಕ ಕಡೆಗಳಿಂದ ಪ್ರವಾಸಿಗರು ಹೆಚ್ಚಿನದಾಗಿ ಪ್ರವಾಸ ಹೊರಟಿದ್ದು ಚಾರ್ಮಾಡಿ ಗ್ರಾಮದ ಗೋಳಿಕಟ್ಟೆ ಕಡೆಗೆ ಬಸ್ ತೆರಳುತ್ತಿದ್ದರೆ ಮೂಡಿಗೆರೆಯ ಮುಖಾಂತರವಾಗಿ ಧರ್ಮಸ್ಥಳದ ಕಡೆಗೆ ಬಸ್ ಸಾಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ರಜೆ ನಿಮಿತ್ತ ಶೃಂಗೇರಿಗೆ ಆಗಮಿಸಿದ ಪ್ರವಾಸಿಗರ ದಂಡು :
ಶೃಂಗೇರಿ : ಕಳೆದ ಎರಡು ದಿನಗಳಿಂದ ಪ್ರವಾಸಿಗರ ದಂಡೇ ಶೃಂಗೇರಿಗೆ ಹರಿದು ಬರುತ್ತಿದ್ದು ಅಲ್ಲಲ್ಲಿ ಕೆಲ ಸಮಸ್ಯೆಗಳು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಎದುರಾಗಿದೆ.
ಪವಿತ್ರ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ಪ್ರವಾಸಿಗರಿಗೆ ವಾಹನ ನಿಲ್ಲಿಸಲು ಹಾಗೂ ತಂಗಲು ಲಾಡ್ಜ್ ಗಳ ಸಮಸ್ಯೆ ಎದುರಾಗಿದೆ.
ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಗುಡ್ ಫ್ರೈಡೇ ನಿಮಿತ್ತ ಸಾಲು ಸಾಲು ರಜೆಗಳು ಒಂದೆಡೆ ದೊರೆತಿದ್ದು ಇನ್ನೊಂದೆಡೆ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾದ ಹಿನ್ನೆಲೆ ಅನೇಕ ಸಂಖ್ಯೆಯಲ್ಲಿ ಪ್ರವಾಸಿಗರು ತಮ್ಮ ವಾಹನಗಳ ಮೂಲಕ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಆಗಮಿಸುತ್ತಿದ್ದಾರೆ.
ವಾಹನ ಪಾರ್ಕಿಂಗ್ ಫುಲ್ ರಶ್ :
ಶೃಂಗೇರಿಯ ಗಾಂಧೀ ಮೈದಾನದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಪ್ರವಾಸಿಗರು ತಮ್ಮ ವಾಹನಗಳನ್ನು ದೇವಾಲಯದ ಮುಂಭಾಗದ ರಸ್ತೆಯಾದ ಭಾರತೀ ಬೀದಿಯಲ್ಲಿ ನಿಲುಗಡೆ ಮಾಡುತ್ತಿದ್ದರೆ ಈ ಕಾರಣದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ನಡೆದುಕೊಂಡು ಸಾಗುವ ಪಾದಚಾರಿಗಳಿಗೂ ಕೂಡ ಸಮಸ್ಯೆ ಉಂಟಾಗಿದೆ.
ಪಟ್ಟಣದಲ್ಲಿರುವ ಆಂಜನೇಯನ ದೇವಾಲಯಗಳಲ್ಲಿ ರಾಮನವಮಿ, ಹನುಮ ಜಯಂತಿಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಪ್ರತಿದಿನ ರಾತ್ರಿ ವೇಳೆಯಲ್ಲಿ ಸಾಗುವ ಉತ್ಸವದ ಸಂದರ್ಭದಲ್ಲೂ ಕೂಡ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ಮಧ್ಯರಾತ್ರಿಯ ವರೆಗೂ ಕೂಡ ಪ್ರವಾಸಿಗರು ಶೃಂಗೇರಿಗೆ ಆಗಮಿಸುತ್ತಿದ್ದು ಎಲ್ಲೆಡೆ ತಂಗಲು ರೂಂಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತಾ ದಾರಿಯಲ್ಲಿ ಓಡಾಡುವ ಸ್ಥಳೀಯ ವ್ಯಕ್ತಿಗಳಲ್ಲಿ ರೂಂ ಕುರಿತಾಗಿ ವಿಚಾರ ಮಾಡುವುದು ಹೆಚ್ಚಾಗಿ ಕಂಡುಬಂತು.
ಪ್ರವಾಸಿಗರು ಒನ್ ವೆ ಮುಖಾಂತರವೇ ದೇವಾಲಯವನ್ನು ಪ್ರವೇಶ ಮಾಡುತ್ತಿರುವ ಕಾರಣ ಪಟ್ಟಣದ ಭಾರತೀ ಬೀದಿ ಹಾಗೂ ಹಿಂಭಾಗದ ಬೈಪಾಸ್ ರಸ್ತೆಯಲ್ಲೂ ಕೂಡ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆ ಅಗಲೀಕರಣ ಹಾಗೂ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯ ಮೂಲಕವಷ್ಟೇ ಈ ಸಮಸ್ಯೆಗಳು ಬಗೆಹರಿಯಲಿದೆ.










0 Comments