ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೋರ್ವ ಮಾರಕಾಸ್ತ್ರಗಳಿಂದ ಭೀಕರವಾಗಿ ತನ್ನ ಸಂಬಂಧಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. 

ಇದನ್ನೂ ಓದಿ : ಶಿವಮೊಗ್ಗದಲ್ಲಿ ಹತ್ಯೆಗೀಡಾದ ವಿಶ್ವನಾಥ್ ಶೆಟ್ಟಿ ಪುತ್ರನ ಸಂಪೂರ್ಣ ಜವಾಬ್ದಾರಿ ನನ್ನದು : ಮೃತ ಹರ್ಷನ ಸಹೋದರಿ ಅಶ್ವಿನಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಟ್ಟಮಕ್ಕಿ ನಿವಾಸಿ ಅಕ್ಕಿ ಮಂಜಪ್ಪ ಅವರ ಪುತ್ರ ನಾಗೇಶ್ ಮೇಲೆ ಹೆಗ್ಗೋಡು ಬಸಗೇರಿ ಗಗನ್ ಎಂಬಾತ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.

ನಾಗೇಶ್ ಹೆಗ್ಗೋಡು ಅವರು ಗೌತಮಿ ಎಂಬುವವರನ್ನು ಮದುವೆಯಾಗಿ ಐದು ವರ್ಷಗಳು ಕಳೆದಿದ್ದು ಈ ದಂಪತಿಗೆ ಒಂದು ಮಗುವಿದ್ದು ಕುಟುಂಬದಲ್ಲಿ ಕಲಹ ಉಂಟಾಗಿ ದಂಪತಿಗಳ ನಡುವೆ ಹೊಂದಾಣಿಕೆಯಿರದ ಕಾರಣ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಈ ಮಧ್ಯೆ ನಾಗೇಶ್ ರವರು ಕಾರ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ತೆರಳಿದ ಗೌತಮಿ ಅವರ ಸಹೋದರ ಗಗನ್ ಮಾರಕಾಸ್ತ್ರಗಳಿಂದ ತೀವ್ರವಾಗಿ ನಾಗೇಶ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಾಗೇಶ್ ರವರು ದೂರು ದಾಖಲು ಮಾಡಿದ್ದಾರೆ.

ಮಾರಕಾಸ್ತ್ರದಿಂದ ತೀವ್ರವಾಗಿ ಹೊಡೆದು ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಗಗನ್ ತೆರಳಿದ್ದು ನಂತರದಲ್ಲಿ ನಾಗೇಶ್ ಅವರ ಆಫೀಸ್ ನ ಸಹೋದ್ಯೋಗಿಗಳು ಶೀಘ್ರವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಅವರು ಅತಿಶೀಘ್ರವಾಗಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಸೂಕ್ತವಾದ ರಕ್ಷಣೆಯನ್ನು ಒದಗಿಸಬೇಕೆಂದು ಇಲಾಖೆಯನ್ನು ಕೋರಿದ್ದಾರೆ. ಪ್ರಸ್ತುತ ನಾಗೇಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.