ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶಾಸಕ ಸಿಟಿ ರವಿ ಅವರ ಆಯೋಜಕತ್ವದೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಯಶಸ್ವಿಯಾಗಿ ಚಿಕ್ಕಮಗಳೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನೆರವೇರಿತು.
ಇದನ್ನೂ ಓದಿ : ಜಯಪುರ : ಭೀಕರ ರಸ್ತೆ ಅಪಘಾತ ; ಓರ್ವ ಮಹಿಳೆ ಸಾವು ಇನ್ನೋರ್ವ ವ್ಯಕ್ತಿಯ ಸ್ಥಿತಿ ಗಂಭೀರ
ಚಿಕ್ಕಮಗಳೂರಿನ ಎಐಟಿ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಉಚಿತ ತಪಾಸಣಾ ಹಾಗೂ ಉಚಿತ ಚಿಕಿತ್ಸಾ ಶಿಬಿರದಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ತಮ್ಮ ಸಮಸ್ಯೆಗಳಿಗೆ ವೈದ್ಯರಿಂದ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಆದಿಚುಂಚನಗಿರಿ ಮಠದ ಪೂಜ್ಯ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯಶ್ರೀಗಳು ಜೀವನದ ಪ್ರತಿಯೊಂದು ಸಾಧನೆಗೂ ಆರೋಗ್ಯ ಅವಶ್ಯಕ ಆರೋಗ್ಯವೇ ಎಲ್ಲರ ಭಾಗ್ಯ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಜಿಲ್ಲಾಡಳಿತ ಶಾಸಕರು ಸೇರಿದಂತೆ ಸರ್ವರಿಗೂ ಒಳಿತಾಗಲಿ. ಜನರ ಆರೋಗ್ಯ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗಲಿ. ಜನರು ಸದೃಢ ಆರೋಗ್ಯವನ್ನು ಹೊಂದಿದಾಗ ಹೆಚ್ಚಿನ ಗಮನವನ್ನು ಆರೋಗ್ಯದ ಮೇಲೆ ನೀಡಿ ಆರೋಗ್ಯ ಕುಂಠಿತವಾಗದಂತೆ ಆದ್ಯತೆ ನೀಡಬೇಕು ಎಂದರು.
ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಕುರಿತು ಮಾತನಾಡಿದ ಶಾಸಕ ಸಿಟಿ ರವಿ ಈ ಮಹತ್ಕಾರ್ಯ ದಿಂದ ನಮಗೆ ಪ್ರೇರಣೆ ಹಾಗೂ ಶಕ್ತಿ ಬಂದಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶ್ರಮವಹಿಸಿ ಜನರ ಆರೋಗ್ಯಕ್ಕೆ ಉಪಯುಕ್ತವಾಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅಥವಾ ತಪಾಸಣೆಗಾಗಿ ಶಿಫಾರಸು ಮಾಡಿದ ರೋಗಿಗಳನ್ನು ಉಚಿತವಾಗಿ ಬೇರೆಡೆಗೆ ಕರೆದುಕೊಂಡು ಹೋಗಿ ಉತ್ತಮ ಮಟ್ಟದ ಚಿಕಿತ್ಸೆ ನೀಡಿ ವಾಪಸ್ ಕರೆತರಲಾಗುವುದು ಎಂದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ, ಒಕ್ಕಲಿಗರ ದಂತವೈದ್ಯ ಕಾಲೇಜು ಬೆಂಗಳೂರು, ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ ಬೆಂಗಳೂರು, ಬಿ. ಜಿ.ಎಸ್ ಅಪೋಲೋ ಆಸ್ಪತ್ರೆ ಮೈಸೂರು, ಏನಾಪೋಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ನೌಕರರ ಸಂಘ ಚಿಕ್ಕಮಗಳೂರು, ನಿಮ್ಹಾನ್ಸ್ ಬೆಂಗಳೂರು, ಜಯದೇವ ಹೃದ್ರೋಗ ಬೆಂಗಳೂರು ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಬಾಲಗಂಗಾಧರನಾಥ ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಅವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಜರುಗಿತು.
ಬೆಳಿಗ್ಗೆ 9-00 ರಿಂದ ಸಂಜೆಯವರೆಗೆ ನಡೆದ ಈ ಶಿಬಿರದಲ್ಲಿ 600ಕ್ಕೂ ಹೆಚ್ಚು ನುರಿತ ವೈದ್ಯರು ರೋಗಿಗಳ ವಿವಿಧ ಬಗೆಯ ಕಾಯಿಲೆಗಳನ್ನು ತಪಾಸಣೆ ಮಾಡಿ ಸೂಕ್ತವಾದ ಚಿಕಿತ್ಸೆ ನೀಡಿದರು. ಎನ್.ಸಿ.ಸಿ, ಎನ್.ಎಸ್.ಎಸ್, ನೆಹರು ಯುವಕೇಂದ್ರ, ಯುವ ಸ್ಪಂದನ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೇರಿದಂತೆ ಅನೇಕ ಸಂಸ್ಥೆಗಳ ಸ್ವಯಂ ಸೇವಕರು ಈ ಶಿಬಿರದಲ್ಲಿ ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದರು.
ಈ ಆರೋಗ್ಯ ಶಿಬಿರದಲ್ಲಿ ಹೃದ್ರೋಗ, ವೈದ್ಯಕೀಯ ಚಿಕಿತ್ಸಾ, ಕಿವಿ, ಮೂಗು, ಗಂಟಲು ಸಂಬಂಧಿತ ತೊಂದರೆಗಳು, ನರರೋಗ,ಶಸ್ತ್ರ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಮೂತ್ರ ಪಿಂಡ, ಗರ್ಭಿಣಿ ಮತ್ತು ಸ್ತ್ರಿ ರೋಗ,ಕಣ್ಣಿನ ಪರೀಕ್ಷೆ, ಮಧುಮೇಹ, ಕೀಲು ಮೂಳೆ, ಚರ್ಮರೋಗ, ಪಿತ್ತ ಜನಕಾಂಗ, ದಂತ ವೈದ್ಯ, ಮಾನಸಿಕ ರೋಗ, ಕ್ಯಾನ್ಸರ್ ತಪಾಸಣೆ, ಪ್ಲಾಸ್ಟಿಕ್ ಸರ್ಜರಿ,ಸಮುದಾಯ ಆರೋಗ್ಯ ವಿಭಾಗ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಚಿತ ವೈದ್ಯಕೀಯ ತಪಾಸಣೆಗಳನ್ನು ನಡೆಸಿ ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ನೀಡಿ ಅಗತ್ಯವಿದ್ದವರಿಗೆ ಬೇರೆ ಆಸ್ಪತ್ರೆಗಳಿಗೆ ತೆರಳಲು ವ್ಯವಸ್ಥೆಯನ್ನು ಮಾಡಲಾಯಿತು.
ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಸರ್ವರಿಗೂ ಊಟ ಉಪಹಾರದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು. 40,000 ಕ್ಕೂ ಅಧಿಕ ಜನರು ಈ ಶಿಬಿರದಲ್ಲಿ ಪಾಲ್ಗೊಂಡರು, 10 ಸಾವಿರಕ್ಕೂ ಅಧಿಕ ಕನ್ನಡಕ ವಿತರಿಸಲಾಯಿತು. ಹಳ್ಳಿಗಳಿಂದ ಬರಲು ಉಚಿತ ಬಸ್ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಜನರು ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರೋಗ್ಯ ಸಚಿವ ಡಾ.ಕೆ ಸುಧಾಕರ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಭೋಜೆಗೌಡ, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಶಾಸಕ ಎಂ.ಪಿ ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಡಿ.ಹೆಚ್.ಓ ಡಾ.ಉಮೇಶ್, ಜಿಲ್ಲಾಧಿಕಾರಿಗಳಾದ ಕೆ ಎನ್ ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

.jpeg)
.jpeg)

0 Comments