ಶೃಂಗೇರಿ : (ನ್ಯೂಸ್ ಮಲ್ನಾಡ್ ಫೋಕಸ್) ಶೃಂಗೇರಿಯಲ್ಲಿ ನಿನ್ನೆ ಆರೋಗ್ಯ ಮೇಳ ನಡೆಯಿತು, ಒಟ್ಟಾರೆ 1696 ಜನರು ಇದರ ಸದುಪಯೋಗ ಪಡೆದುಕೊಂಡರು.

ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸಾಕಷ್ಟು ಶ್ರಮವಹಿಸಿ ತಯಾರಿ ಮಾಡಿದ ಕಾರಣ ಸ್ವಚ್ಛತೆಯಿಂದ ಕೂಡಿದ್ದು, ವ್ಯವಸ್ಥೆಗೆ ಶಕ್ತಿ ಮೀರಿ ಪ್ರಯತ್ನಿಸಿದ್ದರು.

ಇದನ್ನೂ ಓದಿ : ಹೆಜ್ಜೇನು ದಾಳಿಗೆ ತುತ್ತಾಗಿ ಕೊನೆಯುಸಿರೆಳೆದ ಕಾಫಿ ಮಂಡಳಿ ಅಧ್ಯಕ್ಷ


ಮೊದಲೇ ಹಳ್ಳಿಗಳಲ್ಲಿ ನೋಂದಣಿಗೆ ವ್ಯವಸ್ಥೆ ಮಾಡಲಾಗಿತ್ತು, ನೊಂದಣಿ ಆಗದೆ ಇದ್ದವರಿಗೆ ಸ್ಥಳದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಹಾಗೆಯೇ ಬಹಳಷ್ಟು ಊರುಗಳಿಗೆ ರೋಗಿಗಳನ್ನು ಕರೆದುಕೊಂಡು ಬರಲು ವಾಹನ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯ ರಸ್ತೆಯಿಂದ ಆಸ್ಪತ್ರೆಗೆ ರೋಗಿಗಳನ್ನು ತಲುಪಿಸಲು ಆಂಬುಲೆನ್ಸ್ ಹಾಗೂ ಇಲಾಖೆ ವಾಹನಗಳ ಮೂಲಕ ಸಾಕಷ್ಟು ವ್ಯವಸ್ಥೆ ಮಾಡಿದ್ದು ಸಿಬ್ಬಂದಿಗಳು ಶ್ರಮವಹಿಸಿ ಕೆಲಸ ಮಾಡಿದರು. ಶೃಂಗೇರಿ ಆಸ್ಪತ್ರೆಯ ಜಾಗದಲ್ಲಿ ಬಹುತೇಕ ಕಬಳಿಕೆ ಆಗಿರುವುದರಿಂದ ಮೇಳಕ್ಕೆ ಜಾಗದ ಕೊರತೆಯ ಕಾರಣ ಮೇಳವನ್ನು ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ಸೂಕ್ತ ಶಾಮಿಯಾನ, ಖುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತಾದರೂ ಬಿಸಿಲಿನ ತಾಪಕ್ಕೆ ರೋಗಿಗಳು ಸುಸ್ತಾದರು.

ಚಿಕಿತ್ಸೆ ಪಡೆದ ರೋಗಿಗಳು ನಾಳೆ ಎಲ್ಲಿಗೆ ಹೋಗಬೇಕು ಎಂಬುದು ಬಡಜನರ ಪ್ರಶ್ನೆಯಾಗಿತ್ತು. ಕ್ಷೇತ್ರದ ವೈಟ್ ಕಾಲರ್ ರಾಜಕಾರಣಿಗಳಿಗೆ ಇಂದಿನವರೆಗೂ ಅದ್ಯಾವುದೂ ಪ್ರಶ್ನೆ ಎನಿಸಲೇ ಇಲ್ಲ.




ಆರೋಗ್ಯ ಸಚಿವರಿಂದ ಭೇಟಿಗೆ ವಿಶೇಷ ತಯಾರಿ, ಅಧಿಕಾರಿಗಳ ಶ್ರಮ, ಆದರೆ ಸುಧಾಕರ್ ಚಕ್ಕರ್

ಆರೋಗ್ಯ ಮೇಳ ಉದ್ಘಾಟನೆಗೆ ಆರೋಗ್ಯ ಸಚಿವರು ಬರುವ ಹಿನ್ನೆಲೆಯಲ್ಲಿ ಈ ತಿಂಗಳು 28ಕ್ಕೆ ಆಗಬೇಕಿದ್ದ ಆರೋಗ್ಯ ಮೇಳವನ್ನು ತರಾತುರಿಯಲ್ಲಿ 23ಕ್ಕೇನೆ ಆಯೋಜನೆ ಮಾಡಲಾಗಿತ್ತು. ಅದಕ್ಕಾಗಿ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸಿದ್ದರು. ಆದರೆ 22ರಂದು ಹರಿಹರಪುರಕ್ಕೆ ಬಂದಿದ್ದ ಸುಧಾಕರ್ ಅದೇ ದಿನ ಬೆಂಗಳೂರಿಗೆ ವಾಪಾಸು ತೆರಳಿದ್ದರು.

ಈ ಹಿಂದೆ ಸರ್ಕಾರಿ ಆಸ್ಪತ್ರೆಗೆ ಭೇಟಿ ಎಂಬ ನೆಪದಲ್ಲಿ ಬಂದು ಕನಿಷ್ಠ ಆಸ್ಪತ್ರೆಗೆ ಸಹ ಭೇಟಿ ನೀಡದೇ, ಖಾಸಗಿ ಕೆಲಸ ಮುಗಿಸಿಕೊಂಡು ಹೋಗಿದ್ದ, ಹೋಗುವಾಗ ಆಸ್ಪತ್ರೆ ಹೋರಾಟ ಸಮಿತಿ ಬೇಡಿಕೆಗೆ ಉತ್ತರಿಸಿ ಮಾಧ್ಯಮಗಳ ಎದುರು ನೂರು ಬೆಡ್ ಆಸ್ಪತ್ರೆ ಮಾಡಿಯೇ ಸಿದ್ಧ ಎಂದು ಡೈಲಾಗ್ ಹೊಡೆದು, ವೈದ್ಯರ ಕೊರತೆಯನ್ನು ಹದಿನೈದು ದಿನಗಳಲ್ಲಿ ಪೂರೈಸುವುದಾಗಿ ಹಸಿ ಸುಳ್ಳಿನ ಭರವಸೆ ನೀಡಿ ಹೋಗಿದ್ದ ಆರೋಗ್ಯ ಸಚಿವ ಸುಧಾಕರ್ ಗಾಗಿ ಅಷ್ಟೆಲ್ಲಾ ತರಾತುರಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದು ವ್ಯರ್ಥವಾಯಿತು. ಹಾಗೆಯೇ ಸ್ವಲ್ಪ ಸಮಯ ನೀಡಿ ಮಾಡಿದ್ದರೆ ಇನ್ನೂ ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳಲು ಸಹಕಾರಿಯಾಗುತ್ತಿತ್ತು.


ಪ್ರೊಟೊಕಾಲ್ ನಲ್ಲಿ ಡಿ.ಎನ್ ಜೀವರಾಜ್ ಹೆಸರಿಲ್ಲ, ಕ್ಷಣಕಾಲ ಗೊಂದಲ.

ಇನ್ನು ಕಾರ್ಯಕ್ರಮದ ಪ್ರೊಟೊಕಾಲ್ ನಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವರಾದ ಡಿ.ಎನ್ ಜೀವರಾಜ್ ರ ಹೆಸರಿಲ್ಲ ಎಂದು ಉಧ್ಘಾಟನೆ ಸಮಯ ಬಿಜೆಪಿ ಮುಖಂಡರು ಪ್ರಶ್ನಿಸಿದರು, ಇದರಿಂದ ಕ್ಷಣಕಾಲ ಗೊಂದಲ ಉಂಟಾಗಿ ಅದರಿಂದಾಗಿ ಕಾರ್ಯಕ್ರಮ ನಿಲ್ಲುವುದು ಬೇಡ ಎಂದು ಜೀವರಾಜ್ ಅವರು ಹೇಳಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ ಕಾರಣ ವಿಷಯ ಅಲ್ಲಿಗೇ ಮುಗಿಯಿತು.

ಕಳೆದ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಭೇಟಿ ಸಮಯದಲ್ಲಿ ಆಂಬ್ಯುಲೆನ್ಸ್ ಮೇಲೆ ಶಾಸಕರ ಪೋಟೋ ಮುಚ್ಚಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆದು, ಪ್ರೊಟೋಕಾಲ್ ನಿಯಮದ ಪ್ರಕಾರ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ ನಂತರ ವಿಷಯ ತಣ್ಣಗಾಗಿತ್ತು.




ಆರೋಗ್ಯ ಮೇಳದ ಹೆಸರಿನಲ್ಲಿ ಜನಪ್ರತಿನಿಧಿಗಳ ಮೇಳ; ಸಾರ್ವಜನಿಕರ ಟೀಕೆ

ಕಾರ್ಯಕ್ರಮಕ್ಕೆ ಬಂದಿದ್ದ ಜನಪ್ರತಿನಿಧಿಗಳು ರೋಗಿಗಳಿಗೆ ಮಾಡಲಾದ ವ್ಯವಸ್ಥೆ ಬಗ್ಗೆ ಯಾವುದೇ ವಿಶೇಷ ಕಾಳಜಿ ವಹಿಸಿದ್ದು ಕಾಣಲಿಲ್ಲ, ಸ್ಥಳಾವಕಾಶ ಕೊರತೆಯಿಂದ ಒಂದು ವಿಭಾಗದ ವೈದ್ಯರು ಒಂದು ದಿಕ್ಕಿನಲ್ಲಿ ಇದ್ದರೆ ಇನ್ನೊಬ್ಬರು ಮತ್ತೊಂದು ದಿಕ್ಕಿನಲ್ಲಿ ಇದ್ದರು. ಅಂಗವಿಕಲರ ಸರ್ಟಿಫಿಕೇಟ್ ಗಾಗಿ ಎಲ್ಲೆಡೆ ಅಲೆದು ರೋಗಿಗಳು ಪರದಾಡುವಂತಾಗಿತ್ತು‌. ಆಸ್ಪತ್ರೆಯಲ್ಲಿ ಶಾಶ್ವತ ಸಮಸ್ಯೆಯಾದ ಸಿಬ್ಬಂದಿ ಕೊರತೆ, ವೈದ್ಯರ ಕೊರತೆ, ಆಸ್ಪತ್ರೆ ಜಾಗ ಒತ್ತುವರಿ ಇದ್ಯಾವುದೇ ವಿಷಯದ ಬಗ್ಗೆ ಯಾರೂ ಸಹ ಗಮನಹರಿಸಲಿಲ್ಲ. ಇನ್ನು ಜನಪ್ರತಿನಿಧಿಗಳು ತಮ್ಮ ಅಚ್ಚುಕಟ್ಟಿನ ಬಾಷಣ ಮುಗಿಸಿ ನಂತರ ತೆರಳಿದರು. ಅವರು ತೆರಳಿದಂತೆಯೇ ಹಲವು ವೈದ್ಯರು ಸಹ ಸರಿಯಾಗಿ ಸಮಯ ಪಾಲನೆ ಮಾಡದೆ ತೆರಳಿದರು‌. ರೋಗಿಗಳು ಪರದಾಡುವಂತಾಗಿತ್ತು ಎಂದು ರೋಗಿಗಳು ದೂರಿದ್ದಾರೆ‌. ಜನಪ್ರತಿನಿಧಿಗಳು ಯಾವುದೇ ಶಾಶ್ವತ ಪರಿಹಾರಕ್ಕಾಗಿ ವ್ಯವಸ್ಥೆ ಮಾಡದೆ, ಸರ್ಕಾರ ವ್ಯವಸ್ಥೆ ಮಾಡಿರುವ ಒಂದು ದಿನದ ಆರೋಗ್ಯ ಮೇಳ ಜನಪ್ರತಿನಿಧಿಗಳ ಮೇಳವಾಗಿತ್ತು ಎಂಬ ಟೀಕೆ ವ್ಯಕ್ತವಾಗಿದೆ.

ಹೋರಾಟ ಸಮಿತಿ ಬೇಡಿಕೆಗೆ ಮಾತು ಕೊಟ್ಟ ಶಾಸಕರು, ಮಾತು ಉಳಿಸಿಕೊಳ್ತಾರಾ?

ಇನ್ನು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಆಸ್ಪತ್ರೆ ಹೋರಾಟ ಸಮಿತಿ ಕಾರ್ಯಕರ್ತರು ಖಾಲಿ ಹುದ್ದೆಗೆ ವೈದ್ಯರ ನೇಮಕಾತಿ ಸಂಬಂಧ ಶಾಸಕರನ್ನು ಒತ್ತಾಯಿಸಿದರು, ಒಂದು ದಿನದ ಆರೋಗ್ಯ ಮೇಳ ಮುಗಿದ ನಂತರ ಇನ್ನು ಐದು ವರ್ಷ ಶೃಂಗೇರಿ ಜನತೆ ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು, ಆದಕಾರಣ ಖಾಲಿ ಇರುವ ವೈದ್ಯರ ನೇಮಕ ಆಗಬೇಕು. ಈ ಹಿಂದೆ ಕೊಪ್ಪದ ವೈದ್ಯರನ್ನು ವಾರದಲ್ಲಿ ಎರಡೆರಡು ದಿನ ಡೆಪ್ಯುಟೇಶನ್ ಹಾಕಲು ಮನವಿ ಮಾಡಿದಾಗ ನೀವು ಸೂಚನೆ ನೀಡಿದ್ದರೂ ಡಿಎಚ್ಓ ಕಣ್ಣಿನ ವೈದ್ಯರು, ಮಕ್ಕಳ ತಜ್ಞರು ಹಾಗೂ ಇತರೆ ವೈದ್ಯರನ್ನು ಶೃಂಗೇರಿಗೆ ಡೆಪ್ಯುಟೇಶನ್ ಹಾಕಿಲ್ಲ ಹಾಗಾಗಿ ಅವರನ್ನು ಸಹ ಕರೆಸಿ ಅವರು ಉತ್ತರಿಸಲಿ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕೆಲವು ಚರ್ಚೆ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೋವಿಡ್ ಕಾರಣದಿಂದ ಕೊಪ್ಪದ ವೈದ್ಯರನ್ನು ಹಾಕಲು ಆಗಿರಲಿಲ್ಲ, ಕಣ್ಣಿನ ವೈದ್ಯರು, ಮಕ್ಕಳ ತಜ್ಞರನ್ನು ನೇಮಕ ಮಾಡುವುದಾಗಿಯೂ ಹಾಗೂ ಇನ್ನುಳಿದ ಅತ್ಯವಶ್ಯಕ ಹುದ್ದೆಗಳಿಗೆ ಭರ್ತಿ ಮಾಡಲು ಸೂಕ್ತ ಕ್ರಮ ವಹಿಸುವುದಾಗಿ ಶಾಸಕ ಟಿ.ಡಿ ರಾಜೇಗೌಡರು ಮಾತು ನೀಡಿದರು. ಮಾತು ಉಳಿಸಿಕೊಳ್ಳುತ್ತಾರಾ ನೋಡಬೇಕಿದೆ.