ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಪ್ರಾಕೃತಿಕ ಸೊಬಗನ್ನು ಹೊಂದಿರುವ ಮಲೆನಾಡಿನಲ್ಲಿ  ಸ್ವಚ್ಛಂದವಾಗಿ ಎಲ್ಲೆಡೆ ಹರಿಯುತ್ತಿರುವ ತುಂಗೆ ಮಲೆನಾಡಿನ ಜೀವನದಿ. ಗಂಗಾ ಸ್ನಾನಂ ತುಂಗಾ ಪಾನಂ ಎಂಬ ಗಾದೆಯಿದೆ. ಗಂಗೆಯಲ್ಲಿ ಮಿಂದೆದ್ದರೆ ಸಕಲ ರೋಗಗಳು ಪರಿಹಾರವಾಗುತ್ತದೆ ಎನ್ನುವಷ್ಟು ಶ್ರೇಷ್ಠ ಹಾಗೆಯೇ ತುಂಗಾ ನದಿಯ ನೀರು ಸಿಹಿಯಾದುದು, ಪರಿಶುದ್ಧವಾದದ್ದು ಹಾಗೂ ಪಶ್ಚಿಮ ಘಟ್ಟದಲ್ಲಿ ಹರಿಯುವುದರಿಂದ ಅತ್ಯಮೂಲ್ಯ ಗಿಡಮೂಲಿಕೆಗಳಿಂದಾಗಿ ಔಷಧೀಯ ಗುಣಗಳನ್ನು ಸಹ ಹೊಂದಿದೆ ಆ ಕಾರಣಕ್ಕೆ ಸತ್ವಯುತವಾದದ್ದು ಎಂಬ ನಂಬಿಕೆ ಇದೆ.

ಅತಿಯಾದ ಮಾಲಿನ್ಯ, ಲಾಡ್ಜ್, ಚರಂಡಿ ಸೇರಿದಂತೆ ಅನೇಕ ಸ್ಥಳಗಳ ಕಲುಷಿತ ನೀರು, ಮಾಂಸದಂಗಡಿಗಳ ತ್ಯಾಜ್ಯ, ಶೌಚಾಲಯಗಳ ನೀರು ನೇರವಾಗಿ ತುಂಗಾ ನದಿಗೆ ಸೇರಿ ಇಂದು ನೀರು ಕುಡಿಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿದಿನ ಪ್ರವಾಸಿಗರು ಆಗಮಿಸುತ್ತಾರೆ, ಅವರು ಗಾಂಧೀ ಮೈದಾನದ ಸುತ್ತ ಮುತ್ತಲಿನ ಸ್ಥಳದಲ್ಲಿ ಗಲೀಜು ಮಾಡುವುದು ಕೂಡ ನದಿಯು ಕಲುಷಿತಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 

ಇದನ್ನೂ ಓದಿ : ಚಿಕ್ಕಮಗಳೂರು : ಅರಣ್ಯ ನಾಶ ಮಾಡುವವರ ಜೀವನ ನಾಶವಾಗಲೆಂದು ಪುರದಮ್ಮ ದೇವರಲ್ಲಿ ಹರಕೆ ಹೊತ್ತ ಗ್ರಾಮಸ್ಥರು


ಅನೇಕ ಬಾರಿ ಊರಿನ ಬಗ್ಗೆ ಕಾಳಜಿ ಹೊಂದಿರುವವರು, ಸಾಮಾಜಿಕ ಕಾರ್ಯಕರ್ತರು ಈ ಕುರಿತಾಗಿ ಸ್ಥಳೀಯ ಸಂಸ್ಥೆಗೆ, ಮಾಲಿನ್ಯ ನಿಯಂತ್ರಣ ಇಲಾಖೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರಮುಖೇನ ಸಮಸ್ಯೆಯ ಕುರಿತು ತಿಳಿಸಿದ್ದರೂ ಕೂಡ ಯಾರೂ ಸಹ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಈಗ ನದಿಯ ಉಳಿವಿಗಾಗಿ ಶೃಂಗೇರಿಯಲ್ಲಿ ತುಂಗಾ ನದಿ ಉಳಿಸಿ ಆಂದೋಲನ ಸಮಿತಿಯು ಕಾರ್ಯರೂಪಕ್ಕೆ ಬಂದು ಅನೇಕ ಸಭೆಗಳನ್ನು ನಡೆಸಿ, ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಪವಿತ್ರಗೊಂಡಿರುವ ನದಿಯನ್ನು ಮಾಲಿನ್ಯಮುಕ್ತ ಮಾಡುವ ಸಲುವಾಗಿ ಕಾರ್ಯಾರಂಭಿಸಿದೆ. ಈ ಸಮಿತಿಯು ಪಟ್ಟಣದ ನಾಲ್ಕು ಜಾಗದಲ್ಲಿ ನೀರಿನ ಮಾದರಿಯನ್ನು ಸಂಗ್ರಹಣೆ ಮಾಡಿ ವರದಿಗಾಗಿ ಪರೀಕ್ಷಾಲಯಕ್ಕೆ ಕಳುಹಿಸಿತ್ತು. 

ನೀರಿನ ಪರಿಶೀಲನೆಯ ನಂತರದಲ್ಲಿ ಬಂದ ವರದಿಯ ಪ್ರಕಾರ ಶೃಂಗೇರಿಯ ಕಟ್ಟೆಬಾಗಿಲು ಬೈಪಾಸ್ ರಸ್ತೆ ಬಳಿಯಲ್ಲಿ ಹರಿಯುವ ನೀರು ಕುಡಿಯಲು ಯೋಗ್ಯವಾಗಿಲ್ಲ ಹಾಗೂ   ಮೆಣಸೆ ಸೇತುವೆಯ ಕೆಳಭಾಗದ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ ಎಂದು ಶೃಂಗೇರಿ ತಾಲೂಕಿನ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ನೀರಿನ ಮಾದರಿಯ ಆಧಾರದ ಮೇಲೆ ತಿಳಿಸಿದೆ. 


ದಟ್ಟ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಿಂದ ಔಷಧೀಯ ಗುಣಗಳನ್ನು ಹೊಂದಿ ಹರಿಯುವ ತುಂಗಾ ನದಿಯ ನೀರು ಸಿಹಿ ಹಾಗೂ ಸತ್ವಯುತವಾದದ್ದು ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಪರಿಸರಮಾಲಿನ್ಯ, ಹಲವೆಡೆಯ ಕಲುಷಿತ ನೀರನ್ನು ನೇರವಾಗಿ ಹೊಳೆಗೆ ಬಿಡುವುದು ಸೇರಿದಂತೆ ಅನೇಕ ರೀತಿಯ ಮಾಲಿನ್ಯದಿಂದ ನದಿಯು ಇಂದು ಈ ಸ್ಥಿತಿಯನ್ನು ಬಂದು ತಲುಪಿದೆ. 

ತಮ್ಮ ಜವಾಬ್ದಾರಿಯನ್ನು ಮರೆತಿರುವ ಜನರು ಇನ್ನಾದರೂ ಎಚ್ಚೆತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ಗಮನಹರಿಸಬೇಕು. ನದಿಗೆ ಎಸೆಯುತ್ತಿರುವ ಪ್ಲಾಸ್ಟಿಕ್ ಕವರ್ ಗಳಿಗೆ ಇನ್ನಾದರೂ ಬ್ರೇಕ್ ಬೀಳಬೇಕಿದೆ. ಮಲೆನಾಡು ಸೇರಿದಂತೆ ವಿವಿಧೆಡೆಯ ಜನರ ಮತ್ತು ಜೀವಸಂಕುಲದ ಜೀವನಾಡಿಯಾಗಿರುವ ತುಂಗೆಯ ಉಳಿವಿಗೆ ಹಾಗೂ ಪರಿಶುದ್ಧತೆಗೆ ಜನರು ಸಹಕರಿಸಬೇಕು.


ಕೆರೆಗೆ ಬಿದ್ದು ಮರಣಹೊಂದಿದ 21 ವರ್ಷ ಪ್ರಾಯದ ಯುವಕ ; ಪ್ರಕರಣ ದಾಖಲು

ಮೂಡಿಗೆರೆ : ಮನೆಯಿಂದ ರಾತ್ರಿಯ ವೇಳೆಗೆ ಹೊರಗೆ ತೆರಳಿದ್ದ ಯುವಕ ಕೆರೆಗೆ ಬಿದ್ದ ಮೃತಪಟ್ಟಿರುವ ದುರ್ಘಟನೆ ಬೆಳಕಿಗೆ ಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನ ಛೇಗು ಗ್ರಾಮದಲ್ಲಿರುವ ಕೆರೆಗೆ ಬಿದ್ದು ಅದೇ ಗ್ರಾಮದ ಯುವಕ ಪ್ರಮೋದ್ (21) ಪ್ರಾಣ ಕಳೆದುಕೊಂಡಿದ್ದಾನೆ. ಮನೆಯಿಂದ ರಾತ್ರಿ ಹೊರಹೋಗಿದ್ದ ಪ್ರಮೋದ್ ಮನೆಗೆ ಬಾರದೇ ಇದ್ದುದನ್ನು ಕಂಡ ಪೋಷಕರು ಆತಂಕದಿಂದ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಆತನ ಸುಳಿವು ಅವರಿಗೆ ಲಭ್ಯವಾಗಲಿಲ್ಲ. 


ನಂತರದಲ್ಲಿ ಛೇಗು ಗ್ರಾಮದ ಕೆರೆಯ ಸಮೀಪದಲ್ಲಿ ಆತನ ಪಾದರಕ್ಷೆಗಳು ದೊರೆತಿದ್ದು ತಕ್ಷಣವೇ ಕುಟುಂಬಸ್ಥರು ಬಣಕಲ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಈ ಕುರಿತು ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳೀಯರ ಹಾಗೂ ಪೊಲೀಸರ ಸಹಕಾರದಿಂದ ನಡೆದ ಕಾರ್ಯಾಚರಣೆಯಲ್ಲಿ ಯುವಕನ ಶವವು ಕೆರೆಯಲ್ಲಿ ದೊರೆತಿದೆ.  

ಮೃತ ಪ್ರಮೋದ್ ನದ್ದು ಆತ್ಮಹತ್ಯೆಯೋ, ಆಕಸ್ಮಿಕ ಸಾವೋ ಎಂದು ಪೊಲೀಸರ ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. 

ಈ ಸಂದರ್ಭದಲ್ಲಿ ಬಣಕಲ್ ಪೊಲೀಸ್ ಠಾಣೆಯ ಪಿಎಸ್ಐ ಗಾಯತ್ರಿ ಎ.ಎಸ್.ಐ ಶಶಿ, ಸಚಿನ್, ವಿನಯ ಕುಮಾರ್ ಮತ್ತು ವಿಪತ್ತು ನಿರ್ವಹಣಾ ತಂಡದ ಸಂಯೋಜಕ ರವಿಕುಮಾರ್, ಕಾರ್ಯಕರ್ತರಾದ ಜಗದೀಶ್, ಆರೀಫ್, ಅಶ್ವಥ್ ಬೆಟ್ಟಗೆರೆ, ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಮತ್ತು ಛೇಗು ಗ್ರಾಮದ ಗ್ರಾಮಸ್ಥರು ಸ್ಥಳದಲ್ಲಿದ್ದರು.