ಹಾಸನ : (ನ್ಯೂಸ್ ಮಲ್ನಾಡ್ ವರದಿ) ಆಹಾರವನ್ನರಸಿಬಂದ ಕಾಡಾನೆಯೊಂದು ಸರ್ಕಾರಿ ಗೋದಾಮಿಗೆ ನುಗ್ಗಿ ಅಕ್ಕಿಯನ್ನು ಹಾಳು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.




ಹಾಸನ ಜಿಲ್ಲೆಯ ಸಕಲೇಶಪುರ ಭಾಗದ ಆಲೂರು ಭಾಗದ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿಗೆ ನುಗ್ಗಿದ ಆನೆಯು ಅಕ್ಕಿಯನ್ನು ಹಾಳುಮಾಡಿದೆ. ಇತ್ತೀಚಿನ ದಿನಗಳಲ್ಲಿ ಆಹಾರವನ್ನು ಹುಡುಕುತ್ತಾ ಆನೆಗಳು ಪಟ್ಟಣಕ್ಕೆ ಬರುತ್ತಿರುವುದು ಮಾಮೂಲಾಗಿದೆ. ಅಂತೆಯೇ ಗೋದಾಮಿನಲ್ಲಿರಿಸಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಆನೆ ಹಾಳು ಮಾಡಿದ್ದು ಆನೆಯ ಪುಂಡಾಟ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಮಲೆನಾಡು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯು ಅನೇಕರನ್ನು ಬಲಿ ಪಡೆದುಕೊಂಡಿದೆ. ಇದಲ್ಲದೆ ಅತಿವೃಷ್ಟಿ ಅನಾವೃಷ್ಟಿಯಿಂದ ಉಳಿಸಿಕೊಂಡ ಬೆಳೆಯನ್ನು ಕೂಡ ನಾಶ ಮಾಡಿರುವುದು ರೈತರಿಗೆ ಬೇಸರ ಉಂಟುಮಾಡಿದೆ. ಆದಷ್ಟು ಶೀಘ್ರವಾಗಿ ಈ ಕುರಿತು ಅಧಿಕಾರಿಗಳು ಗಮನಹರಿಸಿ ಆನೆ ಹಾವಳಿಯನ್ನು ನಿಯಂತ್ರಣಕ್ಕೆ ತರಬೇಕೆಂದು ಅಧಿಕಾರಿಗಳನ್ನು ಸಾರ್ವಜನಿಕರು ಕೋರಿದ್ದಾರೆ.



ಆನೆಯು ಅನ್ನಭಾಗ್ಯದ ಯೋಜನೆಯಡಿಯಲ್ಲಿ ಗೋದಾಮಿನಲ್ಲಿ ಶೇಖರಣೆ ಮಾಡಿಟ್ಟಿದ್ದ ಅಕ್ಕಿಯನ್ನು ನಾಶ ಮಾಡಿದ್ದು ಈ ನಷ್ಟಕ್ಕೆ ಸರಕಾರವೇ ಪರಿಹಾರ ಒದಗಿಸಬೇಕೆಂದು ಡಿಸಿಸಿ ಬ್ಯಾಂಕ್ ನ ಪದಾಧಿಕಾರಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.