ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ತಾಲೂಕು ಮಟ್ಟದ ಆರೋಗ್ಯ ಮೇಳವು ಇಂದು ಕೊಪ್ಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರು ನೆರವೇರಿಸಿದರು.

ಈ ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳದಲ್ಲಿ ಕಣ್ಣಿನ ತಜ್ಞರು, ಮಕ್ಕಳ ತಜ್ಞರು, ದಂತ ವೈದ್ಯರು,ಜನರಲ್ ಫಿಸೀಶಿಯನ್, ಶಸ್ತ್ರಚಿಕಿತ್ಸಾ ತಜ್ನರು, ಎಲುಬು ಕೀಲಿನ ತಜ್ಞರು, ಚರ್ಮರೋಗ ತಜ್ಞರು, ENT ತಜ್ನರು, ಸೇರಿದಂತೆ ಅನೇಕ ತಜ್ನರು ಭಾಗವಹಿಸಿ ಆಗಮಿಸಿದ ರೋಗಿಗಳನ್ನು ಪರಿಶೀಲಿಸಿ ಅವರ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು. 

ಪ್ರಾಥಮಿಕ ಹಂತದಲ್ಲಿ ರೋಗಿಗಳ ರೋಗವನ್ನು ಕಂಡು ಹಿಡಿದು ರೋಗವು ಉಲ್ಬಣವಾಗದಂತೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಆರೋಗ್ಯ ಮೇಳ ಆಯೋಜನೆಗೊಂಡಿದೆ, ಈ ಭಾಗದ ಅನೇಕರು ಇಂದು ಈ ಮೇಳದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದರು. 

ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗಿದೆ, ರೋಗವನ್ನು ಪ್ರಾಥಮಿಕ ಹಂತದಲ್ಲಿ ಕಂಡು ಹಿಡಿದು ಅದಕ್ಕೆ ಪೂರಕವಾದ ಚಿಕಿತ್ಸೆಯನ್ನು ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಮಲೆನಾಡಿನ ಜನರು ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಂಡು ಅವರ ಅಗತ್ಯತೆಗಳನ್ನು ಪೂರೈಸಿ ರೋಗಮುಕ್ತ ಮಾಡುವುದು ಈ ಶಿಬಿರದ ಉದ್ದೇಶವಾಗಿದೆ - ಡಾಕ್ಟರ್ ಗಾನವಿ ಎಮ್, ತಾಲೂಕು ಆಡಳಿತ ವೈದ್ಯಾಧಿಕಾರಿ

ತೀವ್ರತರವಾದ ರೋಗವನ್ನು ಹೊಂದಿರುವ ರೋಗಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸೌಲಭ್ಯವಿರುವ ಸರ್ಕಾರಿ ಅಥವಾ ಖಾಸಗೀ ಆಸ್ಪತ್ರೆಗಳಿಗೆ ರವಾನಿಸಿ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಅವರ ರೋಗವನ್ನು ಗುಣಮುಖ ಮಾಡುವುದು ಇಂದಿನ ಈ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ಡಾಕ್ಟರ್ ಗಾನವಿ ತಿಳಿಸಿದರು. 

ಆರೋಗ್ಯ ಮೇಳಕ್ಕೆ ವರುಣನ ಅಡ್ಡಿ : ಬೆಳಗ್ಗಿನಿಂದ ಆರಂಭವಾದ ಈ ಆರೋಗ್ಯ ಶಿಬಿರದಲ್ಲಿ ಅನೇಕ ರೋಗಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನದ ಬಳಿಕ ಈ ಭಾಗದಲ್ಲಿ ಉಂಟಾದ ಗುಡುಗು ಸಿಡಿಲಿನ ಮಳೆಗೆ ಜನ ಚದುರಿದರು. ವರುಣನ ಆರ್ಭಟದಿಂದಾಗಿ ಆರೋಗ್ಯ ಶಿಬಿರಕ್ಕೆ ಕೆಲಕಾಲ ಅಡ್ಡಿ ಉಂಟಾಯಿತು.

ಇಂದು ನಡೆದ ಈ ಶಿಬಿರದಲ್ಲಿ ವಿಶೇಷ ಚೇತನರ ಕಾರ್ಡ್ ವಿತರಣೆ ಸೇರಿದಂತೆ ಅನೇಕ ಸರ್ಕಾರಿ ಕಾರ್ಯಕ್ರಮಗಳ ಅರಿವು ಹಾಗೂ ಆ ವಿಚಾರಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜನರಿಗೆ ನೀಡಲಾಗಿದೆ ಎಂದರು. ಮೂರು ಸಾವಿರದ ನೂರಕ್ಕೂ ಅಧಿಕ ಮಂದಿ ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದು ಇನ್ನೂ ಅನೇಕರು ಆಸ್ಪತ್ರೆಯಲ್ಲಿ ನೇರವಾಗಿ ನೋಂದಾವಣಿ ಮಾಡಿಕೊಳ್ಳುವ ಮೂಲಕ ಈ ಬೃಹತ್ ಆರೋಗ್ಯ ಮೇಳದ ಅವಕಾಶವನ್ನು ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಈ ಆರೋಗ್ಯ ಶಿಬಿರದಲ್ಲಿ 2,442 ಜನ ಪಾಲ್ಗೊಂಡು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜನರ ಆಗ್ರಹ : ಶೃಂಗೇರಿ ಕ್ಷೇತ್ರದಲ್ಲಿ ಉತ್ತಮ ಸೌಲಭ್ಯಹೊಂದಿರುವ ಹಾಗೂ ಎಲ್ಲಾ ರೀತಿಯ ಆಧುನಿಕ ಉಪಕರಣಗಳನ್ನು ಹೊಂದಿರುವ ಯಾವುದೇ ಆಸ್ಪತ್ರೆಗಳಿಲ್ಲದೇ ಇರುವ ಸಮಸ್ಯೆ ಒಂದೆಡೆಯಾದರೆ ಕೇವಲ ಒಂದು ದಿನ ಮಾತ್ರ ಈ ರೀತಿಯ ಹೆಲ್ತ್ ಕ್ಯಾಂಪ್ ಗಳ ಆಯೋಜನೆ ಮಾಡಿ ಮಾರನೆಯ ದಿನದಿಂದ ಮತ್ತೆ ಖಾಸಗೀ ಆಸ್ಪತ್ರೆಗಳತ್ತ ಮುಖಮಾಡುವ ಪರಿಸ್ಥಿತಿ ರೋಗಿಗಳದ್ದಾಗಿದೆ ಎಂದು ಸಾರ್ವಜನಿಕರು ನ್ಯೂಸ್ ಮಲ್ನಾಡ್ ನೊಂದಿಗೆ ತಮಗುಂಟಾಗಿರುವ ಸಮಸ್ಯೆಗಳ ಕುರಿತು ತಿಳಿಸಿದರು, ಜಿಲ್ಲಾ ಕೇಂದ್ರವು ನೂರು ಕಿಲೋಮೀಟರ್ ದೂರವಿದೆ ಹಾಗೂ ತುರ್ತು ಸಂದರ್ಭಗಳಲ್ಲಿ ಈ ಭಾಗಕ್ಕೆ ಹತ್ತಿರವಿರುವ ಆಸ್ಪತ್ರೆಯಾದ ಮೆಗ್ಗಾನ್ ಗೆ ದಾಖಲಿಸುವಂತೆ ವೈದ್ಯರು ತಿಳಿಸುತ್ತಾರೆ ಆದರೆ ಅಲ್ಲಿಯೂ ಸಮರ್ಪಕವಾದ ಚಿಕಿತ್ಸೆ ದೊರೆಯದೆ ರೋಗಿಗಳ ಸ್ಥಿತಿ ಬಹಳಷ್ಟು ಕಠಿಣವಾಗುತ್ತದೆ ಎಂದು ತಮಗಾಗುತ್ತಿರುವ ಸಮಸ್ಯೆಯ ಕುರಿತು ತಿಳಿಸಿದರು ಹಾಗೂ ಈ ಭಾಗದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣವಾಗಬೇಕೆಂದು ತಮ್ಮ ಅಗತ್ಯತೆಯ ಕುರಿತು ತಿಳಿಸಿದರು.