ಅಜ್ಜಂಪುರ : (ನ್ಯೂಸ್ ಮಲ್ನಾಡ್ ವರದಿ) ಕೇಸರಿ ಶಾಲು ಧರಿಸಿಕೊಂಡು ಖಾಸಗೀ ಕಾರ್ಯಕ್ರಮದಲ್ಲಿ ಭಾಗಿಯಾದ ಪಿಎಸ್ಸೈ ಬಸವರಾಜು ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಅಜ್ಜಂಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಿಎಸ್ಸೈ ಬಸವರಾಜು ಅವರು ಖಾಸಗೀ ಕಾರ್ಯಕ್ರಮವೊಂದರಲ್ಲಿ ಕೇಸರಿ ಶಾಲು ಧರಿಸಿ ವೇದಿಕೆ ಏರಿದ್ದರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸರ್ಕಾರಿ ಹುದ್ದೆಯಲ್ಲಿದ್ದು ಜನಪರ ಕಾಳಜಿ ಹೊಂದಿ ಜನರ ಸೇವೆ ಮಾಡಬೇಕಿರುವ ಅಧಿಕಾರಿಗಳು ಈ ರೀತಿಯಾಗಿ ಕರ್ತವ್ಯ ಲೋಪ ಎಸಗುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯವು ಈಗಾಗಲೇ ಕೇಸರಿ ಶಾಲು ಹಾಗೂ ಹಿಜಾಬ್ ಸಂಘರ್ಷದ ಕಿಚ್ಚಿನಲ್ಲಿ ಹೊತ್ತಿ ಉರಿದಿದೆ ಹೀಗಿರುವಾಗ ಸರ್ವ ಧರ್ಮವನ್ನು ಸಮಾನವಾಗಿ ಕಾಣಬೇಕಿರುವ ಅಧಿಕಾರಿಗಳು ಇಂತಹ ವರ್ತನೆ ನಡೆಸಿರುವುದು ಸರಿಯಲ್ಲ ಎಂದರು.
ಪಿಎಸ್ಸೈ ಅವರಿಗೆ ರಾಜಕೀಯದಲ್ಲಿ ಹೆಚ್ಚು ಆಸಕ್ತಿಯಿದ್ದರೆ ಅವರು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧೆ ಮಾಡಲಿ ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂತಹ ಲೋಪ ಎಸಗುವುದು ಸರಿಯಲ್ಲ ಎಂದು ತರೀಕೆರೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾತನಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ಪದಾಧಿಕಾರಿಗಳು ನೀಡಿದ ಮನವಿಯನ್ನು ಸ್ವೀಕರಿಸಿದ ಡಿವೈಎಸ್ಪಿ ನಾಗರಾಜು ಅವರು ಈ ಆರೋಪಕ್ಕೆ ಸಂಬಂಧಿಸಿದಂತೆ ಸಮರ್ಪಕ ತನಿಖೆ ನಡೆಸಿ ಮೇಲಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗುವುದು ಎಂದರು. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ದೊರನಾಳ್ ಪರಮೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.





0 Comments