ಶೃಂಗೇರಿ /ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಇಲಾಖೆಯ ಅಧಿಕಾರಿಗಳು ಸರ್ಕಾರಿ ಜಾಗದಲ್ಲಿ ಹಾಕಿದ್ದ ಬೇಲಿಯನ್ನು ತೆರವುಗೊಳಿಸಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಸಮೀಪದ ಅಸಗೋಡು ಗ್ರಾಮದ ಸರ್ಕಾರಿ ಸರ್ವೇ ನಂಬರ್ 125 ಹೊನಗೋಡು ಅರಣ್ಯ ಪ್ರದೇಶದಲ್ಲಿ ಹಾಕಿದ್ದ ಬೇಲಿಯ ಕುರಿತು ಶೃಂಗೇರಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ ಸುಬ್ರಮಣ್ಯ ಹೆಚ್.ಎಂ ಹಾಗೂ ಅರಣ್ಯ ರಕ್ಷಕ ರಮೇಶ್ ಅವರು ಮಾಹಿತಿ ಕಲೆ ಹಾಕುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ಕೆಲ ಸ್ಥಳೀಯರು ನಾವೇ ಬೇಲಿ ಹಾಕಿರುವುದು ಎಂದು ಮಾತು ಆರಂಭಿಸಿ ಈ ರೀತಿಯ ಕೆಲಸ ನಡೆಸುವುದು ತಪ್ಪು ಎಂದು ಮಾತನಾಡಿದಾಗ ಅರಣ್ಯ ರಕ್ಷಕ ರಮೇಶ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಹಾಗೂ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಲಾಗಿದೆ ಎಂದು ದೂರು ದಾಖಲಾಗಿದೆ.



ರಮೇಶ್ ಅವರ ಕಣ್ಣಿಗೆ ಹಲ್ಲೆ ನಡೆಸಲಾಗಿದೆ, ಅವರ ಕೆನ್ನೆಗೆ ಹೊಡೆಯಲಾಗಿದೆ ಹಾಗೂ ಬೈಕನ್ನು ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಅಸಗೋಡು ತೌಫೀಕ್, ಶರತ್, ಪುನೀತ್,ಹಸನಬ್ಬ ಮುಂತಾದವರ ಮೇಲೆ ದೂರು ದಾಖಲಾಗಿದ್ದು ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



ಶೃಂಗೇರಿಯಲ್ಲಿ ಬೃಹತ್ ಆರೋಗ್ಯಮೇಳ

ಶೃಂಗೇರಿ : ಶೃಂಗೇರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೃಹತ್ ಆರೋಗ್ಯ ಮೇಳದ ಆಯೋಜನೆಯನ್ನು ಜಿಲ್ಲಾಡಳಿತದ ಆಶ್ರಯದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಆಯೋಜನೆ ನಡೆಸಲಾಗಿದೆ. 

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಚಿಕ್ಕಮಗಳೂರು, ತಾಲೂಕು ಆಡಳಿತ ಶೃಂಗೇರಿ ಇವರ ಆಶ್ರಯದಲ್ಲಿ ಸ್ವಾತಂತ್ರ್ಯ ದೊರಕಿದ 75 ನೆ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳವನ್ನು ಏಪ್ರಿಲ್ 23 ರ ಶನಿವಾರದಂದು ಆಯೋಜನೆ ನಡೆಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಆರೋಗ್ಯಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅಧಿಕಾರಿಗಳು ಕೋರಿದ್ದಾರೆ.



ಈ ಬೃಹತ್ ಆರೋಗ್ಯ ಶಿಬಿರದಲ್ಲಿ ತಜ್ಞ ವೈದ್ಯರುಗಳು ಲಭ್ಯವಿದ್ದು ಹೃದಯ ತಜ್ಞರು, ಮಕ್ಕಳ ತಜ್ಞರು, ಶಸ್ತ್ರ ಚಿಕಿತ್ಸೆ, ಸ್ತ್ರೀ ರೋಗ ತಜ್ಞರು, ಮೂಳೆ ಎಲುಬು ತಜ್ಞರು, ಕಿವಿ, ಮೂಗು,ಗಂಟಲು ತಜ್ಞರು ಸೇರಿದಂತೆ ಎಲ್ಲಾ ಖಾಯಿಲೆಗಳಿಗೆ ಸೂಕ್ತ ರೀತಿಯ ಉಚಿತ ವೈದ್ಯಕೀಯ ಪರೀಕ್ಷೆ ಹಾಗೂ ಸಂಬಂಧಿಸಿದ ಸೌಲಭ್ಯಗಳು ಲಭ್ಯವಿದ್ದು ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ನ್ನು ಹೊಂದಿರಬೇಕೆಂಬ ಸೂಚನೆಯನ್ನು ನೀಡಲಾಗಿದ್ದು ಅರ್ಹರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.