ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಮನವಮಿಯ ಶೋಭಾಯಾತ್ರೆಯ ಸಮಯದಲ್ಲಿ ದೇಶದ ಹಲವೆಡೆ ನಡೆದ ಹಿಂಸಾಚಾರ ಮತ್ತು ಗಲಭೆಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚಿಕ್ಕಮಗಳೂರು ವತಿಯಿಂದ ನಗರದ ಆಝಾದ್ ಪಾರ್ಕ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್ಐ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಚಾಂದ್ ಪಾಷ ದೇಶದಲ್ಲಿ ರಾಮನವಮಿಯ ಧಾರ್ಮಿಕ ಕಾರ್ಯವನ್ನು ನೆಪವಾಗಿಟ್ಟುಕೊಂಡು ರ್ಯಾಲಿ ಮಾಡಿ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಬೆಂಕಿ ಹಚ್ಚಿ, ಮಸೀದಿಗೆ ಬೆಂಕಿ ಹಚ್ಚಿ, ದಾಂಧಲೆ ನಡೆಸಿರುವ ಸಂಘಪರಿವಾರದ ಗೂಂಡಾಗಳನ್ನು ಬಂಧಿಸಬೇಕು, ಹಾಗೂ ಖುರಾನ್ ನ ಆಯತ್ ಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಸಿ.ಟಿ ರವಿ ರವರು ಈ ತಕ್ಷಣ ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು ಮತ್ತು ಮುಂದಿನ ದಿನಗಳಲ್ಲಿ ಸಂಘಪರಿವಾರ ಪ್ರೇರಿತ ಗೂಂಡಾಗಳು ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಸಿದರೆ ಅದನ್ನು ಪ್ರತಿರೋಧಿಸಲು ಪಿಎಫ್ಐ ಸಜ್ಜಾಗಿದೆ ಎಂದು ಹೇಳಿದರು.
SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮೀಲ್ ಖಾನ್ ಮಾತನಾಡಿ ಪೂರ್ವಯೋಜಿತವಾಗಿ ಸಂಘಪರಿವಾರ ನಡೆಸಿದ ಈ ಗಲಭೆಯನ್ನು ನಿಯಂತ್ರಿಸುವಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪಿಎಫ್ಐ ಚಿಕ್ಕಮಗಳೂರು ವಲಯದ ಕಾರ್ಯದರ್ಶಿ ಮುಬಾರಕ್ ಮಾತನಾಡಿ ಪ್ರಸಕ್ತ ಗಲಭೆಯಲ್ಲಿ ಹಲವು ಅಮಾಯಕ ಮುಸ್ಲಿಮರನ್ನು ಬಂಧಿಸಲಾಗಿದ್ದು, ನೂರಾರು ಮನೆಗಳನ್ನು ಧ್ವಂಸಗೈಯ್ಯಲಾಗಿದೆ. ಗಲಭೆಯ ಹಿಂದಿರುವ ಕಾಣದ ಕೈಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ದಲಿತಪರ ಹೋರಾಟಗಾರ ರಾದ ಅಂಗಡಿ ಚಂದ್ರು, ಇಮಾಮ್ ಕೌನ್ಸಿಲ್ ನ ಜುನೇದ್ ಮೌಲಾನ ರವರು ಮಾತನಾಡಿ ಆಕ್ರೋಶ ಹೊರಹಾಕಿದರು.
ಈ ಪ್ರತಿಭಟನೆಯ ಸಂಧರ್ಭದಲ್ಲಿ ಪಿಎಫ್ಐ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಝಮೀರ್ ಬಾಷ, ಹಾಗೂ ಇನ್ನಿತರ ಪಿಎಫ್ಐ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

.jpeg)
.jpeg)

0 Comments