ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊರೋನ ಅವಧಿಯ ನಂತರದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಿ ಮಲೆನಾಡಿನ ಯುವಕ-ಯುವತಿಯರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದ್ದ ಉದ್ಯಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಅವರು ಉದ್ಯೋಗ ಮೇಳ ಆಯೋಜನೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತುಮಖಾನೆಯಲ್ಲಿ ಮೇ ತಿಂಗಳ ಎಂಟನೇ ತಾರೀಕಿನಂದು ಈ ಭಾಗದ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಬೃಹತ್ ಉದ್ಯೋಗ ಮೇಳದ ಆಯೋಜನೆ ಮಾಡಿರುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ
ಅವರು ತಿಳಿಸಿದ್ದಾರೆ.




ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಚಿಕ್ಕಮಗಳೂರು ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಗಳ ಜೊತೆಗೂಡಿ ಶೃಂಗೇರಿ ಕೊಪ್ಪ ನರಸಿಂಹರಾಜಪುರ ತಾಲೂಕುಗಳ ಪ್ರತಿಭಾವಂತರಿಗೆ ಉದ್ಯೋಗ ಮೇಳದ ಆಯೋಜನೆ ಗೊಳಿಸಿ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವುದಾಗಿ ತಿಳಿಸಿದರು. 

ಈ ಉದ್ಯೋಗ ಮೇಳದಲ್ಲಿ 80ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಮೂರು ಸಾವಿರಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ನೀಡಲಿದ್ದು ಮಲೆನಾಡಿನ ಯುವಜನತೆ ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದರು.


ಹತ್ತನೇ ತರಗತಿ ಉತ್ತೀರ್ಣರಾದವರಿಂದ ಉನ್ನತ ಪದವಿ ಸ್ನಾತಕೋತ್ತರ ಪದವಿ ಪಡೆದವರವರೆಗೆ ಈ ಉದ್ಯೋಗ ಮೇಳದಲ್ಲಿ ಅವಕಾಶಗಳು ಲಭ್ಯವಿದ್ದು ಆಸಕ್ತರು ಈ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆಯಬಹುದಾಗಿದೆ.

ಮಲೆನಾಡಿಗರನ್ನು ಉಳಿಸಿ :

ಶೃಂಗೇರಿ : ಮಲೆನಾಡು ಜನಪರ ಒಕ್ಕೂಟದ ವತಿಯಿಂದ ಮಲೆನಾಡಿಗರನ್ನು ಉಳಿಸಿ ಎಂಬ ಶೀರ್ಷಿಕೆಯಡಿ ವಿಶೇಷ ಸಭೆ ನಡೆಯಿತು. ಈ ಸಭೆಯಲ್ಲಿ ಹೋರಾಟದ ಮುಂದಿನ ಹೆಜ್ಜೆಗಳ ಕುರಿತು ಚರ್ಚೆ ನಡೆಯಿತು. 

ಮಲೆನಾಡು ಕೇವಲ ನೋಡಲು ಮಾತ್ರ ಚೆಂದ ಆದರೆ ಇಲ್ಲಿನ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ರಾಜಕೀಯ ವ್ಯಕ್ತಿಗಳಿಗೆ ಸಾಧ್ಯವಾಗಿಲ್ಲ ಈ ಕುರಿತು ಜಾಥಾ ಹಾಗೂ ಮುಷ್ಕರದ ಮೂಲಕ ಸರ್ಕಾರದ ಗಮನ ಸೆಳೆದು ಮಲೆನಾಡಿಗರಿಗೆ ಜೀವನವನ್ನು ಕಟ್ಟಿಕೊಡುವ ಹೋರಾಟವೇ ಮಲೆನಾಡಿಗರನ್ನು ಉಳಿಸಿ ಎಂದು ಈ ಹೋರಾಟದ ನೇತೃತ್ವವಹಿಸಿರುವ ಅನಿಲ್ ಹೊಸಕೊಪ್ಪ ಅವರು ತಿಳಿಸಿದರು.


ಮಲೆನಾಡಿನ ಜನರ ಮೇಲೆ ಅರಣ್ಯ ಇಲಾಖೆ ವ್ಯಾಪಕವಾದ ದೌರ್ಜನ್ಯ ಎಸಗಿದೆ. ಬದುಕು ಕಟ್ಟಿಕೊಳ್ಳಲು ಯಾರೂ ನೆರವಾಗುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ಈ ಅವೈಜ್ಞಾನಿಕ ಕಾಯ್ದೆ ಹಾಗೂ ಕೃಷಿ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಈ ಮಾರಕ ರೋಗಗಳಿಂದ ಮಲೆನಾಡಿಗರು ಬೀದಿಗೆ ಬಂದು ಶೃಂಗೇರಿಗೆ ಬರುವ ಪ್ರವಾಸಿಗರ ಬಳಿ ಭಿಕ್ಷೆ ಬೇಡಿ ಜೀವನ ನಡೆಸುವ ದಿನಗಳು ಬರಲಿದೆ ಆದ ಕಾರಣ ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತು ಜನರ ಸಮಸ್ಯೆಗಳನ್ನು ಬಗೆಹರಿಸಿ ಜನರ ಧ್ವನಿಯಾಗಬೇಕೆಂದು ಪರಿಸರವಾದಿ ಹಾಗೂ ಹೋರಾಟಗಾರ ಕಲ್ಕುಳಿ ವಿಠ್ಠಲ್ ಹೆಗ್ಡೆ ಅವರು ನೆರೆದವರನ್ನುದ್ದೇಶ್ಸಿಸಿ ಮಲೆನಾಡಿನ ಸಮಸ್ಯೆಗಳ ಕುರಿತು ವಿಸ್ಕೃತವಾಗಿ ಮಾತನಾಡಿದರು. 

ಈ ಸಭೆಯ ಕುರಿತು ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಮಧು ಬಂಗಾರಪ್ಪ ನಿಮ್ಮ ಹೋರಾಟಕ್ಕೆ ಸದಾ ನಾನು ಬೆಂಬಲ ನೀಡುತ್ತೇನೆ ಈ ಸಮಸ್ಯೆ ಚಿಕ್ಕಮಗಳೂರು, ಶಿವಮೊಗ್ಗ,ಹಾಸನ,ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವ್ಯಾಪಿಸಿದೆ. ನಾವು ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಈ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಈ ನಿಟ್ಟಿನಲ್ಲಿ ನಡೆಯುವ ಎಲ್ಲಾ ಕಾರ್ಯಗಳಿಗೂ ಮತ್ತು ಹೋರಾಟಕ್ಕೂ ಸಿದ್ಧವಿರುವುದಾಗಿ ನೆರೆದವರಲ್ಲಿ ತಿಳಿಸಿದರು. 


ಈ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಹೋರಾಟ ನಡೆಸಿದಾಗ ಮಾತ್ರ ಅತೀ ಚುರುಕಾಗಿ ಸಮಸ್ಯೆಗಳಿಗೆ ಉತ್ತರ ಲಭಿಸುತ್ತಾ ಹೋಗುತ್ತದೆ ಈ ಹಿಂದೆಯೂ ರಸ್ತೆಗಿಳಿದು ಒಗ್ಗಟ್ಟಿನಿಂದ ಹೋರಾಟ ನಡೆಸಿ ಪಡೆದುಕೊಂಡ ವಿಜಯದ ನಿದರ್ಶನಗಳಿವೆ. ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸವನ್ನು ನಿರಂತರವಾಗಿ ಮಾಡಿದಾಗ ಮಾತ್ರ ಈ ಭಾಗದ ಜ್ವಲಂತ ಸಮಸ್ಯೆಗಳು ಪರಿಹಾರವಾಗಲಿದೆ ಈ ನಿಟ್ಟಿನಲ್ಲಿ ತನು,ಮನ,ಧನ ಈ ಮೂರನ್ನು ಅರ್ಪಣೆ ಮಾಡಿ ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು. 

ಈ ಸಭೆಯಲ್ಲಿ ಮಧು ಬಂಗಾರಪ್ಪ, ಶಾಸಕ ಟಿ.ಡಿ ರಾಜೇಗೌಡ, ಸುಧೀರ್ ಕುಮಾರ್ ಮುರೊಳ್ಳಿ,ಅನಿಲ್ ಹೊಸಕೊಪ್ಪ, ಸಂತೋಷ್ ಕಾಳ್ಯ,ಕಲ್ಕುಳಿ ವಿಠ್ಠಲ್ ಹೆಗ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.