ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗೋವುಗಳನ್ನು ಪಿಕಪ್ ವಾಹನದಲ್ಲಿ ಸಾಗಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ವಾಹನದಲ್ಲಿದ್ದ ಗೋ ಸಾಗಾಟಗಾರರು ಸೆರೆ ಸಿಕ್ಕಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಲೇಔಟ್ ನಿರ್ಮಾಣ ಸಂಬಂಧ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಬಿಕ್ಕರಣೆ - ಮಾಗುಂಡಿ ರಸ್ತೆಯಲ್ಲಿ ಹಸುಗಳನ್ನು  ಕಳುವು ಮಾಡಿಕೊಂಡು ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಬಿಕ್ಕರಣೆ ಮಧ್ಯದ ಸೀನಶೆಟ್ಟಿ ಅವರ ಮನೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. 

ಈ ಕುರಿತು ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳದಲ್ಲಿದ್ದ ಮಾಗುಂಡಿ ಮೂಲದ ಚಾಲಕ ವೃತ್ತಿಯ ಜಬ್ಬರ್ ಹಾಗೂ ಬಿಕ್ಕರಣೆ ಹುಯಿಗೆರೆ ಗ್ರಾಮದ ಶಿವಣ್ಣ ಬಿನ್ ನಾಗಪ್ಪಶೆಟ್ಟಿ ಇಬ್ಬರನ್ನು ವಶಕ್ಕೆ ಪಡೆದು ಈ ಕುರಿತು ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಹಸುಗಳ ಸಾಗಾಟವನ್ನು ಮಾಂಸಕ್ಕಾಗಿ ಉಪಯೋಗ ಮಾಡುತ್ತಿರುವ ಕುರಿತು ಅವರೇ ಬಾಯ್ಬಿಟ್ಟಿದ್ದಾರೆ.

ವಾಹನದ ಹಿಂಭಾಗಕ್ಕೆ ಭತ್ತದ ಹುಲ್ಲನ್ನು ಹಾಕಿ ಮುಚ್ಚಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಅಕ್ರಮ ಸಗಾಟಗಾರರು ಸಂಚು ರೂಪಿಸಿರುವುದು ನಂತರದಲ್ಲಿ ಗೊತ್ತಾಗಿದೆ. ಮೂರು ಹಸುಗಳು ಪಿಕಪ್ ವಾಹನದಲ್ಲಿ ದೊರೆತಿದ್ದು ಆರೋಪಿಗಳೇ ಹಸುಗಳನ್ನು ಮಾಂಸಕ್ಕಾಗಿ ಕದ್ದೊಯ್ಯುತ್ತಿರುವ ಕುರಿತಾಗಿ ಪೊಲೀಸರ ಬಳಿ ತಿಳಿಸಿದ್ದಾರೆ. ಈ ಸಂಬಂಧ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.