ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹರಿಹರಪುರ ಶ್ರೀ ಮಠದಲ್ಲಿ ಹದಿನೈದು ದಿನಗಳ ಕಾಲ ಅದ್ಧೂರಿ ಹಾಗೂ ವೈಭವದಿಂದ ನಡೆಯುವ ಮಹಾ ಕುಂಭಾಭಿಷೇಕದ ಅಂಗವಾಗಿ ಭರದಿಂದ ಸಿದ್ಧತೆಗಳು ಸಾಗಿದ್ದು ಪ್ರತಿಯೊಂದು ಕಾರ್ಯಕ್ಕೆ ಶ್ರೀಗಳು ನಿರಂತರವಾಗಿ ಮಾರ್ಗದರ್ಶನ ನೀಡುತ್ತಲಿದ್ದಾರೆ. ಹರಿಹರಪುರ ಮಠದ ಮಾರ್ಗ ಸೇರಿದಂತೆ ಇಡೀ ಪಟ್ಟಣವನ್ನು ಅಲಂಕೃತಗೊಳಿಸಿ ಕಂಗೊಳಿಸುವಂತೆ ಮಾಡಲಾಗಿದೆ. 

ಇದನ್ನೂ ಓದಿ : ಗ್ರಾಮ ಪಂಚಾಯತ್ ಅಧ್ಯಕ್ಷನ ಶೋಕಿ! ಸ್ವಂತ ಕಾರಿಗೆ ಕರ್ನಾಟಕ ಸರ್ಕಾರದ ಲಾಂಛನ ಹೊಂದಿದ ಬೋರ್ಡ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿರುವ ಶ್ರೀ ಮಠವು ಧರ್ಮಪ್ರಸಾರದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಜ್ಞಾನಾರ್ಜನೆಯ ಸಲುವಾಗಿ ಹಲವಾರು ರೀತಿಯ ಕಾಯಕಗಳನ್ನು ಮಾಡುತ್ತಾ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಲಿದೆ. 

ಶ್ರೀ ಮಠದಲ್ಲಿ ಈ ಹಿಂದಿನಿಂದಲೂ ಶ್ರೇಷ್ಟವಾದ ಗುರುಪರಂಪರೆಯಿದ್ದು, ಪ್ರಸ್ತುತ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಸಂಕಲ್ಪದಿಂದ ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯವು ಇದೀಗ ಮುಗಿಯುವ ಹಂತದಲ್ಲಿದ್ದು ಇದೀಗ ದೇವಾಲಯಗಳ ಪುನಃ ಪ್ರತಿಷ್ಠಾ ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 10 ರಿಂದ ಏಪ್ರಿಲ್ 24 ರ ವರೆಗೆ ಆಯೋಜನೆಗೊಂಡಿದೆ.

ಮಹಾಕುಂಭಾಭಿಷೇಕ ಹಾಗೂ ಪುನಃಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಮಠದಲ್ಲಿ ಆಯೋಜನೆಗೊಂಡಿದ್ದು ದಿನಾಂಕ 15 ಏಪ್ರಿಲ್ 2022 ರ ಶುಕ್ರವಾರ ಶ್ರೀಗಳು ಶಾರದಾ ದೇವಿಗೆ ಮಹಾ ಕುಂಭಾಭಿಷೇಕವನ್ನು ಮಾಡಲಿದ್ದಾರೆ. ಅಂತೆಯೇ ಶ್ರೀ ಮಠದ ಆವರಣದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು ನಾಡಿನ ಪ್ರಖ್ಯಾತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

ಕೇಂದ್ರ ಹಾಗೂ ರಾಜ್ಯ ನಾಯಕರ ಆಗಮನ :

ಈ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗಣ್ಯರ ದಂಡೇ ಹರಿದು ಬರಲಿದ್ದು ಭಾರತ ಸರ್ಕಾರದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್, ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

ಅನೇಕ ಸಮಿತಿಗಳನ್ನು ಈ ಕಾರ್ಯಕ್ರಮದ ಯಶಸ್ಸಿಗಾಗಿ ಹಾಗೂ ಉತ್ತಮ ನಿರ್ವಹಣೆಗಾಗಿ ರಚಿಸಿದ್ದು ಆಯಾಯ ಕಮಿಟಿಗಳ ಸದಸ್ಯರು ಮುಖ್ಯಸ್ಥರ ಸೂಚನೆಯಂತೆ ಕಾರ್ಯನಿರ್ವಹಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಭಾಗಿಯಾಗಲಿದ್ದಾರೆ. 


ನಾಳೆ ಹೊರೆ ಕಾಣಿಕೆ :

ದಿನಾಂಕ 10.04.2022 ರ ಭಾನುವಾರದಂದು ಹೊರೆಕಾಣಿಕೆ ಸಮರ್ಪಣಾ ನಡೆಯಲಿದ್ದು ಭಕ್ತರು ಅಕ್ಕಿ, ಆಹಾರಧಾನ್ಯ, ಕಟ್ಟಿಗೆ ಸೇರಿದಂತೆ ಈ ಮಹಾತ್ಕಾರ್ಯಕ್ಕೆ ತಮ್ಮ ಕೈಲಾದ ಕಾಣಿಕೆಯನ್ನು ಸಮರ್ಪಣೆ ಮಾಡಬಹುದಾಗಿದೆ. ಆಗಮಿಸುವ ಭಕ್ತಾದಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಎಲ್ಲಾ ಏರ್ಪಡುಗಳು ನಡೆಯುತಲಿದ್ದು ಆಗಮಿಸುವ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಶ್ರೀ ಮಠ ಕಲ್ಪಿಸಲಿದೆ.