ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣ ಪಂಚಾಯತ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣ ಪಂಚಾಯತ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯು ಎಲ್ಲಾ ನಿಯಮಗಳನ್ನು ಪಾಲಿಸಿ ಪಟ್ಟಣ ಪಂಚಾಯತ್ ಅಧಿಕಾರಿಗಳು ಸದಸ್ಯರು ಸೇರಿದಂತೆ ಕ್ರಮ ಬದ್ಧವಾಗಿ ನಡೆದಿದೆ. ಶೃಂಗೇರಿ ಗಾಂಧಿ ಮೈದಾನದ ವಾಹನಗಳ ಸುಂಕ ವಸೂಲಾತಿಯ ಟೆಂಡರ್ ಪ್ರಕ್ರಿಯೆಯು ಸಭಾ ನಿರ್ಣಯದಂತೆ ನಡೆದಿದೆ. ಟೆಂಡರ್ ಅವಧಿಯ ನಂತರದಲ್ಲಿ ಹಣ ಪಾವತಿ ಮಾಡಲು ತಿಳಿಸಿದ್ದರೂ ಕೂಡ ಹಣ ಪಾವತಿ ಮಾಡದ ಕಾರಣ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ ಹಾಗೂ ಅನಾವಶ್ಯಕವಾಗಿ ಈ ಕುರಿತುಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದಿದ್ದಾರೆ.
ಈ ಹಿಂದೆ ಗಾಂಧಿ ಮೈದಾನದ ಟೆಂಡರ್ ಹಣವನ್ನು ಪಡೆಯಬೇಕೆಂದು ಪ್ರತಿಭಟನೆ ನಡೆಸಿದವರೇ ಇಂದು ಹಣ ವಸೂಲಿ ಮಾಡಲು ಸಮಯ ನೀಡಬೇಕು ಎಂದು ಪ್ರತಿಭಟನೆ ನಡೆಸಿರುವುದು ವಿಪರ್ಯಾಸ, ಕೌನ್ಸಿಲ್ ಬಾಡಿಯ ನಿರ್ಣಯದಂತೆ ಮುಂದಿನ ಕಾರ್ಯಗಳು ನಡೆಯಲಿದೆ. ಈ ವಿಚಾರವಾಗಿ ಶಾಸಕರ ವರ್ತನೆ ಸಮಂಜಸವಾದದ್ದಲ್ಲ - ಹರೀಶ್ ವಿ ಶೆಟ್ಟಿ, ಅಧ್ಯಕ್ಷರು ಶೃಂಗೇರಿ ಪಟ್ಟಣ ಪಂಚಾಯತ್
ಹಿಂದಿನ ಅವಧಿಯಲ್ಲಿ ಸಮರ್ಪಕವಾಗಿ ಹಣ ಪಾವತಿ ಮಾಡದ ಕಾರಣ ಈ ಬಾರಿ ಏಕ ಕಂತಿನಲ್ಲೇ ಟೆಂಡರ್ ಹಿಡಿದವರು ಹಣ ಪಾವತಿಸಬೇಕೆಂದು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಹಣ ವಸೂಲಿ ಮಾಡುವ ಕುರಿತಾಗಿ ಕಾಂಗ್ರೆಸ್ ಸದಸ್ಯರು ಪಟ್ಟಣ ಪಂಚಾಯತ್ ನ ಮುಂಭಾಗದಲ್ಲಿ ಈ ಹಿಂದೆ ಪ್ರತಿಭಟಿಸಿದ್ದರು, ಆದರೆ ಇದೀಗ ಅವರೇ ಹಣ ಪಾವತಿಮಾಡಲು ಕಂತುಗಳನ್ನು ನೀಡಬೇಕೆಂದು ತಮ್ಮ ದ್ವಿಮುಖ ನೀತಿಯನ್ನು ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು ಹಾಗೂ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರು ಸ್ಪಷ್ಟಪಡಿಸಿದರು.
ಅಂತೆಯೇ ಶೃಂಗೇರಿ ಪಟ್ಟಣ ಪಂಚಾಯಿತಿಗೆ ಶಾಸಕರು ಆಗಮಿಸಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಬದಲು ಗುತ್ತಿಗೆ ಪಡೆದವರಿಂದ ಶೇಕಡ 25 ರಷ್ಟು ಹಣವನ್ನು ಪಡೆದು ಅವರಿಗೆ ಅನುಮತಿ ನೀಡುವಂತೆ ತೀವ್ರತರವಾದ ಒತ್ತಡವನ್ನು ಹೇರಿದ್ದಾರೆ ಇದು ಅಧಿಕಾರಿಗಳ ಕರ್ತವ್ಯ ಪಾಲನೆಗೆ ಅಡ್ಡಿಯಾಗಿದೆ ಎಂಬ ಆರೋಪವನ್ನು ಅಧ್ಯಕ್ಷರು ಮಾಡಿದರು. ಶಾಸಕರ ಈ ನಡೆಗೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಇದು ಅವರ ಸ್ಥಾನಕ್ಕೆ ಅಗೌರವ ತೋರುತ್ತದೆ ಎಂದರು.
ಬಿಜೆಪಿ ಸದಸ್ಯರ ಈ ತೀರ್ಮಾನ ಸರಿಯಲ್ಲ :
ಹಿಂದಿನ ಅವಧಿಯಲ್ಲಿ ಗುತ್ತಿಗೆ ಪಡೆದವರಿಗೆ ಹಣವನ್ನು ಕಂತಿನ ಮೂಲಕ ಪಾವತಿಸಲು ಅವಕಾಶ ನೀಡಲಾಗಿತ್ತು ಆದರೆ ಈ ಬಾರಿ
ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಎಂಬತ್ತು ಲಕ್ಷ ಹಣ ಪಾವತಿ ಮಾಡುವಂತೆ ನಿರ್ಣಯ ಕೈಗೊಂಡಿರುವುದು ಅವೈಜ್ಞಾನಿಕವಾಗಿದೆ ಈ ತೀರ್ಮಾನವನ್ನು ಕಾಂಗ್ರೆಸ್ ಸದಸ್ಯರು ಒಪ್ಪದೇ ವಿರೋಧ ವ್ಯಕ್ತಪಡಿಸಿದ್ದಾರೆ ಅದರ ಮಧ್ಯೆ ಹಣಕ್ಕಾಗಿ ಒತ್ತಡ ಹೇರುತ್ತಿರುವುದು ಸರಿಯಲ್ಲ, ಪಟ್ಟಣ ಪಂಚಾಯತ್ ಅಧ್ಯಕ್ಷರು ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಕಾಂಗ್ರೆಸ್ನ ಮೊದಲನೇ ವಾರ್ಡ್ ನ ಸದಸ್ಯರಾದ ರಫೀಕ್ ಅಹಮದ್ ಮಾತನಾಡಿದರು.
ನಿಯಮಾವಳಿಗಳ ಅನುಸಾರ ಟೆಂಡರ್ ಪ್ರಕ್ರಿಯೆಯನ್ನು ನಡೆಸಿರುವುದಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಒಂದೆಡೆ ತಿಳಿಸಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ವಿರೋಧ ವ್ಯಕ್ತಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಮಾಡಿದೆ.







0 Comments