ಶೃಂಗೇರಿ/ಕಿಗ್ಗಾ: ವ್ಯಾಪಾರ ಬಹಿಷ್ಕಾರ ಸಂಬಂಧ ಗೊಂದಲದ ವಾತಾವರಣ ನಿರ್ಮಾಣವಾಗಿದ್ದ ಕಿಗ್ಗಾ ಜಾತ್ರೆಯು ಶಾಂತಿಯುತವಾಗಿ ನಡೆಯುವ ಮೂಲಕ ವಿವಾದಗಳಿಗೆ ತೆರೆಬಿದ್ದಿದೆ.
ಹಿಂದೂಯೇತರರಿಗೆ ವ್ಯಾಪಾರ ಬಹಿಷ್ಕಾರಕ್ಕೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ಹಿಂದೂಪರ ಸಂಘಟನೆಗಳು ಅಭಿಯಾನ ನಡೆಸುತ್ತಿದ್ದು ಕಿಗ್ಗಾ ಋಷ್ಯಶೃಂಗ ಜಾತ್ರೆ ಸಂಬಂಧ ಸಹ ನಿಷೇಧದ ಕೂಗು ಕೇಳಿಬಂದಿತ್ತು.
ಕಿಗ್ಗಾ ಋಷ್ಯಶೃಂಗ ದೇವಸ್ಥಾನ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅನುಮತಿ ನೀಡಬಾರದು ಎಂದು ಹಿಂದೂಪರ ಸಂಘಟನೆಗಳು ಹಾಗೂ ಕೆಲವು ಸ್ಥಳೀಯರು ಬ್ಯಾನರ್ ಅಳವಡಿಸಿ, ಗ್ರಾಮ ಪಂಚಾಯಿತಿಗೆ ಹಾಗೂ ತಹಸೀಲ್ದಾರ್ ಗೆ ಮನವಿ ಸಹ ಸಲ್ಲಿಸಿದ್ದರು, ಹಾಗೂ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ, ಕಿಗ್ಗಾ ಚಲೋ ಬೈಕ್ ಜಾಥಾ ಸಹ ನಡೆದಿತ್ತು.
ಆದರೆ ಈ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ಕಿಗ್ಗಾ ಗ್ರಾಮ ಪಂಚಾಯಿತಿ, ಜಾತ್ರೆಗೆ ಅಂಗಡಿ ಹಾಕುವ ಸ್ಥಳಗಳು ಗ್ರಾಮ ಠಾಣಾ ವ್ಯಾಪ್ತಿಗೆ ಬರುವುದರಿಂದ ಮುಜರಾಯಿ ದೇವಸ್ಥಾನ ಸಂಬಂಧ ಇರುವ ಕಾಯ್ದೆ ಇದಕ್ಕೆ ಅನ್ವಯ ಆಗುವುದಿಲ್ಲ. ಆ ಕಾರಣದಿಂದ ಯಾರೇ ಅರ್ಜಿ ಸಲ್ಲಿಸಿದರೂ ವ್ಯಾಪಾರಕ್ಕೆ ಅವಕಾಶ ನೀಡುವುದಾಗಿ ತಿಳಿಸಿತ್ತು. ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಕಾನೂನು ಸಲಹೆ ಪಡೆದು ಅಂಗಡಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಎಲ್ಲರಿಗೂ ಅನುಮತಿ ನೀಡಲಾಗಿದೆ. ಇಂದು ಬೆಳಿಗ್ಗೆ ಅಂಗಡಿಗಳಿಗೆ ಕೇಸರಿ ಬಾವುಟ ನೀಡಿದ್ದನ್ನು ಸಹ ಗ್ರಾಮ ಪಂಚಾಯಿತಿ ವತಿಯಿಂದ ತೆಗೆಸಲಾಯಿತು.
ಬಹಳಷ್ಟು ಅಂಗಡಿಗಳಿಗೆ ಅನುಮತಿ ಪಡೆದ ಹಿಂದೂಪರ ಸಂಘಟನೆ ಕಾರ್ಯಕರ್ತರು: ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಬೇಕು ಎಂಬ ಬೇಡಿಕೆಯಿಟ್ಟಿದ್ದ ಹಿಂದೂಪರ ಕಾರ್ಯಕರ್ತರು ಬಹುತೇಕ ಅಂಗಡಿಗಳಿಗೆ ಲೈಸೆನ್ಸ್ ಪಡೆದು ಸ್ವತಃ ತಾವೇ ಅಂಗಡಿ ತೆರೆದಿರುವುದು ಸಹ ಕಂಡುಬಂದಿತು.
ಹಿಂದೂಗಳ ಹೆಸರಲ್ಲಿ ಲೈಸೆನ್ಸ್, ಮುಸ್ಲಿಮರ ಅಂಗಡಿ: ಇನ್ನೂ ಕೆಲವು ಅಂಗಡಿಗಳು ಹಿಂದೂಗಳ ಹೆಸರಿನಲ್ಲಿ ಲೈಸೆನ್ಸ್ ಪಡೆದಿದ್ದು ಮುಸ್ಲಿಂ ವ್ಯಾಪಾರಿಗಳು ಅಂಗಡಿ ತೆರೆದಿದ್ದು ಸಹ ಕಂಡುಬಂದಿತು.

.jpeg)

.jpeg)

0 Comments