ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಜನರ ಸಂಚಾರಕ್ಕೆ ಪ್ರಮುಖವಾಗಿದ್ದ ಸಹಕಾರ ಸಾರಿಗೆ ಬಸ್ ಗಳು ನಿಂತು ಎರಡು ವರ್ಷಗಳು ಕಳೆದಿವೆ. ಈ ಹಿನ್ನೆಲೆ ಯಾವುದೇ ಕಾರಣಗಳನ್ನು ನೀಡದೆ ಸಾರಿಗೆ ಬಸ್ ಸಂಚಾರ ಆರಂಭ ಮಾಡಬೇಕು ಇಲ್ಲದೇ ಹೋದಲ್ಲಿ ಶೃಂಗೇರಿ ಬಂದ್ ಗೆ ಕರೆ ನೀಡಲಾಗುವುದು ಮತ್ತದು ಅನಿವಾರ್ಯ ಎಂದು ಜಿಲ್ಲಾಡಳಿತವನ್ನು ಟ್ರಾನ್ಸ್ಪೋರ್ಟ್ ಅಂಡ್ ಜನರಲ್ ಮಜ್ದೂರ್ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಇದನ್ನೂ ಓದಿ : ಚಿಕ್ಕಮಗಳೂರು : ಮಾರಕಾಸ್ತ್ರಗಳಿಂದ ಹಲ್ಲೆಗೈದು ಯುವಕನ ಬರ್ಬರ ಹತ್ಯೆ
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರನ್ನು ಒತ್ತಾಯಿಸಿರುವ ಜಿಲ್ಲಾ ಟ್ರಾನ್ಸ್ಪೋರ್ಟ್ ಅಂಡ್ ಜನರಲ್ ಮಜ್ದೂರ್ ಸಂಘದ ಪದಾಧಿಕಾರಿಗಳು ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕರು ಕಳೆದ ಅನೇಕ ವರ್ಷಗಳಿಂದ ಸಾರಿಗೆ ಸಂಸ್ಥೆಯ ಬಸ್ ಗಳನ್ನು ನಂಬಿಕೊಂಡು ಜೀವನಾಧಾರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದರು ಆದರೆ ಇದೀಗ ಎರಡು ವರ್ಷಗಳಿಂದ ಅವರ ಸ್ಥಿತಿಯನ್ನು ಯಾರೂ ಕೇಳುವವರೇ ಇಲ್ಲ ಎಂದು ಅಳಲನ್ನು ವ್ಯಕ್ತಪಡಿಸಿದರು ಹಾಗೂ ಬಸ್ಸನ್ನು ಪುನರಾರಂಭ ಮಾಡಬೇಕೆಂದು ಕೋರಿದರು.
ಈ ಹಿಂದಿನಿಂದಲೂ ರಾಜ್ಯದ ಗೃಹ ಸಚಿವರು ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡಿದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ, ಜಿಲ್ಲಾಧಿಕಾರಿಗಳೇ ಕೊಪ್ಪ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಎರಡು ತಿಂಗಳು ಕಳೆದರೂ ಅಧಿಕಾರ ವಹಿಸಿಕೊಂಡಿಲ್ಲ ಎಂಬ ಆರೋಪವನ್ನು ಮಾಡಿದರು.
ನೂತನ ಆಡಳಿತ ಮಂಡಳಿಯ ರಚನೆ ಮಾಡಿ ಸಂಸ್ಥೆಗೆ ಹಾಕಿರುವ ಬೀಗವನ್ನು ತೆರವುಗೊಳಿಸಬೇಕು ಹಾಗೂ ತನಿಖೆಯ ಮೂಲಕ ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಶೀಘ್ರವಾಗಿ ನೂತನ ಆಡಳಿತ ಮಂಡಳಿಯ ರಚನೆ ಮಾಡಿ ಬಸ್ ಗಳು ರಸ್ತೆಗಿಳಿಯುವಂತೆ ಮಾಡಬೇಕು ಈ ಕುರಿತು ಯಾವುದೇ ನಿರ್ಧಾರಗಳನ್ನು ಕೈಗೊಳ್ಳದೇ ಹೋದಲ್ಲಿ ಇದೇ ಏಪ್ರಿಲ್ ತಿಂಗಳ 14 ನೆಯ ತಾರೀಖಿನಂದು ಕೊಪ್ಪದ ತಾಲೂಕು ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಾಗೂ ಏಪ್ರಿಲ್ 22 ರಂದು ಶೃಂಗೇರಿ ಕ್ಷೇತ್ರ ಬಂದ್ ಗೆ ಕರೆ ನೀಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ಸಹಕಾರ ಸಾರಿಗೆ ಬಸ್ ಗಳು ನಿಂತು ಎರಡು ವರ್ಷ ಕಳೆದ ಹಿನ್ನೆಲೆ ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಗೂ ನೌಕರರು ಭ್ರಷ್ಟಾಚಾರದ ಕುರಿತು ನೀಡಿದ ಮಾಹಿತಿಯನ್ನಾಧರಿಸಿ ನ್ಯೂಸ್ ಮಲ್ನಾಡ್ ವರದಿ ಮಾಡಿತ್ತು. ಪೊಲೀಸ್ ಅಧಿಕಾರಿಗಳು ಸಾರಿಗೆ ಸಂಸ್ಥೆಯ M.D ಗಾಡ್ವಿನ್ ಪ್ರಕಾಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಟ್ರಾನ್ಸ್ಪೋರ್ಟ್ ಅಂಡ್ ಜನರಲ್ ಮಜ್ದೂರ್ ಸಂಘದ ಅಧ್ಯಕ್ಷರಾದ ಹೆಚ್.ಆರ್ ಸಂಜೀವ, ಉಪಾಧ್ಯಕ್ಷರಾದ ಹೆಚ್.ಸಿ ಕಟ್ಟೇಗೌಡ, ಸದಸ್ಯರುಗಳಾದ ರಮೇಶ್ ಶಾಸ್ತ್ರಿ, ಎನ್.ಎಂ ನಾಗೇಶ್, ಹಾಲಪ್ಪ ಗೌಡ, ಚೇತನ್, ಜಯಪ್ರಕಾಶ್, ಸುರೇಶ್ ಇನ್ನಿತರರು ಹಾಜರಿದ್ದರು.






0 Comments