ಯುಗಾದಿ ಹಬ್ಬದ ದಿನವಾದ ಶನಿವಾರದಂದು ಆರು ಜನ ಯುವಕರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪ್ರವಾಸಿ ತಾಣವಾದ ಅಯ್ಯನಕೆರೆಗೆ ತೆರಳಿ ಅಲ್ಲಿಂದ ವಾಪಸ್ ಆಗುವ ಸಂದರ್ಭದಲ್ಲಿ ಮದ್ಯ ಖರೀದಿಗಾಗಿ ಸಖರಾಯಪಟ್ಟಣದ ಬಾರ್ ವೊಂದಕ್ಕೆ ತೆರಳಿ ಬಿಯರ್ ಖರೀದಿ ನಡೆಸುತ್ತಾರೆ. ಈ ಸಂದರ್ಭದಲ್ಲಿ ಹತ್ತು ರೂಪಾಯಿ ಚಿಲ್ಲರೆಯ ನಿಮಿತ್ತ ಇನ್ನೋರ್ವ ಕ್ಯಾಷಿಯರ್ ಆದ ಲಕ್ಷ್ಮೀಶ ಎಂಬುವವನ ಜೊತೆಗೆ ಗಲಾಟೆ ಆರಂಭವಾಗಿದೆ. ಇಬ್ಬರ ನಡುವೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಯುವಕರು ಬೈಕುಗಳನ್ನು ರಸ್ತೆಗೆ ಅಡ್ಡಲಾಗಿಟ್ಟು ಗಲಾಟೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಯುವಕರಿಗೆ ಬೈಕ್ ರಸ್ತೆಯಿಂದ ಬದಿಗೆ ನಿಲ್ಲಿಸುವಂತೆ ಯಶ್ಪಾಲ್ ಮನವಿ ಮಾಡಿದ್ದಾನೆ. ಸಾರ್ವಜನಿಕರಿಗೆ ಸಂಚಾರ ಮಾಡಲು ಕಷ್ಟವಾಗುತ್ತದೆ ಅದಲ್ಲದೆ ಗಲಾಟೆಯಾದರೆ ಪೊಲೀಸರು ಬರುತ್ತಾರೆ, ಸುಮ್ಮನೆ ಗೊಂದಲ ನಿರ್ಮಾಣ ಮಾಡುವ ಬದಲು ಬೈಕ್ ಗಳನ್ನು ಮಧ್ಯ ರಸ್ತೆಯಿಂದ ತೆರವುಮಾಡಿ ಪಕ್ಕದಲ್ಲಿರಿಸುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಆರು ಜನ ಯುವಕರು ಒಮ್ಮೆಲೆ ಯಾಶ್ಪಾಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಯಶ್ಪಾಲ್ ನನ್ನು ಅಲ್ಲಿಯವರು ಚಿಕ್ಕಮಗಳೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಆದರೆ ತೀವ್ರವಾಗಿ ಪೆಟ್ಟಾದ ಕಾರಣ ಹೆಚ್ಚಿನ ಚಿಕಿತ್ಸೆಯ ಅಗತ್ಯವನ್ನು ಮನಗಂಡ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲು ಮಾಡುವಂತೆ ಸೂಚಿಸಿದ್ದಾರೆ. ಆದರೆ ವಿಧಿಯಾಟ ಎಂಬಂತೆ ಮಾರ್ಗ ಮಧ್ಯೆಯೇ ಯಶ್ಪಾಲ್ ಕೊನೆಯುಸಿರೆಳೆದಿದ್ದಾರೆ.
ತಾಯಿ ಮಗ ಇಬ್ಬರೇ ಇದ್ದ ಕುಟುಂಬದಲ್ಲಿ ಇದೀಗ ಮಗನನ್ನು ಕಳೆದುಕೊಂಡ ತಾಯಿ ಅತ್ಯಂತ ದುಃಖದಲ್ಲಿದ್ದಾರೆ. ಮನೆಯ ಆಧಾರ ಸ್ತಂಭ ಕಳಚಿಬಿದ್ದಿದ್ದು ಅವರ ಸ್ಥಿತಿ ಯಾರಿಗೂ ಹೇಳತೀರದಾಗಿದೆ.
ಈ ಕುರಿತಾಗಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯಶ್ಪಾಲ್ ಮೇಲೆ ಹಲ್ಲೆ ನಡೆಸಿದ ನರಿಗುಡ್ಡನಹಳ್ಳಿ ರಘು, ಹೌಸಿಂಗ್ ಬೋರ್ಡ್ ಪ್ರಕಾಶ್, ಕಲ್ಯಾಣ ನಗರದ ಯಶೀಶ್, ತರೀಕೆರೆಯ ಶ್ರೀಧರ್, ಮಂಜುನಾಥ್, ಬೀರೂರು-ಅಜ್ಜಂಪುರ ರಸ್ತೆಯ ಸಂಜಯ್ ಎಂಬ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಈ ಕುರಿತಾಗಿ ಹೆಚ್ಚಿನ ಮಾಹಿತಿಗಳು ಸಂಪೂರ್ಣ ತನಿಖೆಯ ನಂತರವಷ್ಟೇ ದೊರೆಯಬೇಕಿದೆ.






0 Comments