ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ)  ಇಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ DFO ಕಚೇರಿಯಲ್ಲಿ ಶೃಂಗೇರಿಯ ರಾಷ್ಟ್ರೀಯ ಹೆದ್ದಾರಿ 169 ರ ಅಗಲೀಕರಣ ವಿಚಾರವಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ಕರೆಯಲಾಗಿತ್ತು.

ಚತುಷ್ಪಥ ರಸ್ತೆ ನಿರ್ಮಾಣಕ್ಕೆ 218 ಮರಗಳು ಅಡ್ಡಲಾಗಿರುವುದರಿಂದ ಅದನ್ನು ಕಡಿಯಲು ಸಾರ್ವಜನಿಕರು ಹಾಗೂ ಅಧಿಕಾರಿಗಳ ಆಕ್ಷೇಪಣೆ ಇದ್ದಲ್ಲಿ ತಿಳಿಸುವಂತೆ ಹೇಳಲಾಗಿತ್ತು, ಆದರೆ ಇದೊಂದು ಕಾಟಾಚಾರದ ಸಭೆಯಂತೆ ಕಂಡುಬಂದಿತು.

ಈ ಸಭೆಯು ಅರಣ್ಯ ಇಲಾಖೆಯ ಡಿಎಫ್ಓ ಕಛೇರಿಯಲ್ಲಿ ನಡೆಯಿತಾದರೂ ಡಿ.ಎಫ್.ಓ ಅವರೇ ಸಭೆಯಲ್ಲಿ ಉಪಸ್ಥಿತರಿರಲಿಲ್ಲ, ಅವರ ಅನುಪಸ್ಥಿತಿಯಲ್ಲಿ ಎ.ಸಿ.ಎಫ್ ಅವರಾದರೂ ಭಾಗವಹಿಸಬೇಕಿತ್ತು ಆದರೆ ಅವರೂ ಸಹ ಇರಲಿಲ್ಲ.

ಸಭೆಯಲ್ಲಿ ಮರಗಳನ್ನು ಕಡಿಯಲು ಯಾವುದೇ ಆಕ್ಷೇಪಣೆ ಇಲ್ಲ, ಜನರಿಗೆ ರಸ್ತೆ ಅಗಲೀಕರಣ ಅವಶ್ಯಕವಾಗಿರುವುದರಿಂದ ಮರಗಳನ್ನು ಕಡಿಯಲು ನಮ್ಮ ಅನುಮತಿ ಇರುವುದಾಗಿ ಸಭೆಯಲ್ಲಿ ಭಾಗವಹಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಸಾರ್ವಜನಿಕರು ಸಹಿ ಹಾಕಿದರು. ಆದರೆ ಸಭೆಯ ನಿರ್ಣಯವನ್ನು ದಾಖಲಿಸಲು ಸರಿಯಾದ ವ್ಯವಸ್ಥೆ ಇಲ್ಲದೇ ಪುಸ್ತಕವೊಂದರ ಮೇಲೆ ಬರೆದು ಬಂದವರ ಸಹಿ ತೆಗೆದುಕೊಳ್ಳಲಾಗಿದೆ.

ಮರಗಳು ಅರಣ್ಯ ಇಲಾಖೆಯ ಸುಪರ್ದಿ, ಅವುಗಳನ್ನು ಕಡಿಯವ ಕುರಿತು ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೇ ಗೈರಾಗಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡುತ್ತದೆ.