ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಪ್ರತಿದಿನವೂ ಕೂಲಿ ಮಾಡಿಕೊಂಡು, ಸಣ್ಣದಾದ ಗುಡಿಸಲನ್ನು ತನ್ನ ಆಶ್ರಯಕ್ಕಾಗಿ ಬಳಸಿಕೊಂಡು ಜೀವನ ನಡೆಸುತ್ತಿದ್ದಾತನ ಜೀವನ ಪ್ರಸ್ತುತ ಮುರಿದು ಬಿದ್ದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾದ ಯಡದಾಳು ಸಮೀಪವಿರುವ ಎತ್ತುಬುಡಿಕೆ ಗ್ರಾಮದ ಬೆಳ್ಳ ಎಂಬ ವಯಸ್ಸಾದ ವ್ಯಕ್ತಿ ತನ್ನ ಪತ್ನಿಯೊಂದಿಗೆ ಕಳೆದ ಅನೇಕ ವರ್ಷಗಳಿಂದ ಗುಡಿಸಲಿನಲ್ಲೇ ವಾಸವಿದ್ದರು, ತಮ್ಮಷ್ಟಕ್ಕೆ ತಾವು ಕೂಲಿ ಮಾಡಿಕೊಂಡು ನನಗೆ ನೀನು ನಿನಗೆ ನಾನು ಎಂಬಂತೆ ಗುಡಿಸಲಿನಲ್ಲಿ ವಾಸವಿದ್ದ ಕುಟುಂಬಕ್ಕೆ ದೊಡ್ಡದೊಂದು ಆಘಾತ ಉಂಟಾಗಿದೆ.
ಇದನ್ನೂ ಓದಿ : ಬಾಳೆಹೊನ್ನೂರು : ಬುದ್ಧಿ ಹೇಳಿದವನಿಗೆ ಕತ್ತಿ, ದೊಣ್ಣೆಯಿಂದ ಹಲ್ಲೆ ನಡೆಸಿದ ಮೂವರು ಕಾರ್ಮಿಕರು
ಕಳೆದ ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ಸುರಿದ ಭಾರೀ ಮಳೆಗೆ ಬೆಳ್ಳನ ಗುಡಿಸಲು ಸಂಪೂರ್ಣವಾಗಿ ನೆಲಕ್ಕುರುಳಿದೆ. ಬೆಳ್ಳ ಹಾಗೂ ಅವರ ಪತ್ನಿ ಇಬ್ಬರೂ ಕೂಡ ವಾಸಕ್ಕೆ ಮನೆಯಿಲ್ಲದೆ ನಿರಾಶ್ರಿತರಾಗಿದ್ದಾರೆ. ಅವರ ಗೋಳನ್ನು ಕೇಳಲು ಕನಿಷ್ಠ ಏನಾಯಿತು ಎಂದು ಗಮನಹರಿಸಲು ಅಥವಾ ಅವರಿಗೆ ಆಶ್ರಯ ಕಲ್ಪಿಸಲು ಈವರೆಗೆ ಯಾರೂ ಮುಂದೆ ಬಂದಿಲ್ಲ.
ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ಅತೀ ಶೀಘ್ರವಾಗಿ ಪರಿಹಾರದ ಕುರಿತು ಗಮನಹರಿಸಲಾಗುವುದು, ಬೇಕಾದ ಎಲ್ಲಾ ಅವಶ್ಯ ದಾಖಲೆಗಳನ್ನು ಸಂತ್ರಸ್ತರಿಂದ ಪಡೆದು ಅವರಿಗೆ ಶೀಘ್ರವೇ ಆಶ್ರಯ ಒದಗಿಸಲಾಗುವುದು - ಡಾ. ಲೋಕೇಶ್, ತಹಸೀಲ್ದಾರ್ ಶೃಂಗೇರಿ
ಅದೊಂದು ಗುಡಿಸಲಾದ ಕಾರಣ ಅವರು ವಾಸವಿರುವ ಸ್ಥಳ ಸರ್ಕಾರದ ದಾಖಲೆಗಳಿಗೆ ಸೇರಿಲ್ಲ, ಈ ಕುರಿತು ಸ್ವಯಂ ಪ್ರೇರಿತವಾಗಿ ಅಧಿಕಾರಿಗಳಾಗಲಿ ಅಥವಾ ಜನ ಪ್ರತಿನಿಧಿಗಳಾಗಲಿ ಯಾರೂ ಗಮನ ಹರಿಸದೇ ಇರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. ಅತೀ ಶೀಘ್ರವಾಗಿ ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಆಶ್ರಯ ಕಳೆದುಕೊಂಡಿರುವ ಈ ದಂಪತಿಗಳಿಗೆ ಆಶ್ರಯ ಒದಗಿಸಬೇಕಿದೆ.




0 Comments