ಡಿಜಿಟಲ್ ಕಾಲಮ್ (ನ್ಯೂಸ್ ಮಲ್ನಾಡ್) ಸರ್ಕಾರಿ ಕಛೇರಿಗಳಲ್ಲಿ ಕೆಲಸವಾಗಬೇಕೆಂದರೆ ಕೈ ತುಂಬಾ ಕಾಸು ಕೊಡಬೇಕು ಇಲ್ಲವಾದರೆ ಪ್ರಭಾವಿಗಳ ಕೈಯಲ್ಲಿ ವಸೂಲಿ ಮಾಡಿಸಬೇಕು ಎನ್ನುವ ಮಟ್ಟಿಗೆ ಹದಗೆಟ್ಟು ಹೋಗಿದೆ ರಾಜ್ಯದ ಸರ್ಕಾರಿ ವ್ಯವಸ್ಥೆ. 40 % ಕಮೀಷನ್ ಸುದ್ದಿಯಾಗುತ್ತದೆಯೇ ಹೊರತು ತಾಲೂಕು ಕಚೇರಿ, ಪೊಲೀಸ್ ಠಾಣೆ, ಸೇರಿದಂತೆ ಬಹುತೇಕ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ಸುದ್ದಿಯಾಗುವುದೇ ಇಲ್ಲ, ಕಾರಣ ಅಲ್ಲಿ ಸಂಕಷ್ಟಕ್ಕೆ ಒಳಗಾಗುವವನು ಸಾಮಾನ್ಯ ರೈತ, ನಿರ್ಗತಿಕ ಕೂಲಿ ಕಾರ್ಮಿಕ. ಪರಿಸ್ಥಿತಿ ಹೀಗಿರಬೇಕಾದರೆ ಮರು ಭೂಮಿಯಲ್ಲಿನ ಓಯಸಿಸ್ ನಂತೆ ಜನಸಾಮಾನ್ಯರಿಗೆ ಕಾಣಸಿಗುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಉಪ ವಿಭಾಗಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್.

ಭ್ರಷ್ಟಾಚಾರ ಮುಕ್ತ ನ್ಯಾಯಾಂಗ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ನಮ್ಮ ಕೋರ್ಟುಗಳಲ್ಲಿಯೇ ವರ್ಷಾನುಗಟ್ಟಲೆ ಕಾಲ ಪ್ರಕರಣಗಳ ವಿಲೇವಾರಿಗೆ ಸಮಯ ತೆಗೆದುಕೊಳ್ಳುತ್ತಿರುವಾಗ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿದ್ದ ಎಲ್ಲಾ ಪ್ರಕರಣಗಳನ್ನು ವಿಲೇವಾರಿ ಮಾಡಿ ರಾಜ್ಯ ಸರ್ಕಾರದಿಂದ ಶೂನ್ಯ ಬಾಕಿ ಅಭಿನಂದನ ಪತ್ರ ಪಡೆಯುವ ಮೂಲಕ ಎ.ಸಿ ಡಾ. ಹೆಚ್ ಎಲ್ ನಾಗರಾಜ್ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಸರ್ಕಾರಿ ನೌಕರರಿಗೆ ನೀಡಲಾಗುವ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿ, ತಮ್ಮ ಸೇವಾಅವಧಿಯಲ್ಲಿ ನಾಲ್ಕು ಜಿಲ್ಲೆಗಳ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸರ್ವೋತ್ತಮ ಸೇವಾ ಪ್ರಶಸ್ತಿಗಳ ಸರದಾರರಾಗಿದ್ದಾರೆ.

ಸರ್ಕಾರಿ ನೌಕರರ ದಿನವಾದ ಏಪ್ರಿಲ್ 21 ರಂದು 2021 ನೇ ಸಾಲಿನ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅವರಿಂದ ರವರು ಎಸಿ ಡಾ. ಹೆಚ್.ಎಲ್ ನಾಗರಾಜ್ ಅವರು ಪಡೆದಿದ್ದಾರೆ. ಕೆಎಎಸ್ ಅಧಿಕಾರಿಯಾಗಿ ನಾಗರೀಕ ಸೇವೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ಗುಣಾತ್ಮಕವಾದ, ಜನಸ್ನೇಹಿ ಆಡಳಿತದ ಸುಧಾರಣೆಗಾಗಿ ಕೆಲಸ ಮಾಡುತ್ತಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. 

2004ನೇ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿರುವ ಡಾ. ಹೆಚ್.ಎಲ್ ನಾಗರಾಜ್ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿಯವರು. ಹೊಳೆನರಸೀಪುರ, ನಾಗಮಂಗಲ, ಕೆ.ಆರ್ ಪೇಟೆ, ಮದ್ದೂರು, ಚನ್ನರಾಯಪಟ್ಟಣದ ತಹಸೀಲ್ದಾರರಾಗಿ ಕಾರ್ಯನಿರ್ವಹಿಸಿ ಹಾಸನ, ಪಾಂಡವಪುರ, ರಾಮನಗರ ಹಾಗೂ ಪ್ರಸ್ತುತ ಚಿಕ್ಕಮಗಳೂರು ಉಪ ವಿಭಾಗದ ಹಿರಿಯ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮ ಪಂಚಾಯ್ತಿ ಮಟ್ಟದ ಒಬ್ಬ ಸರ್ಕಾರಿ ಅಧಿಕಾರಿ ತನ್ನ ವ್ಯಾಪ್ತಿಯ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಆ ಗ್ರಾಮ ಪಂಚಾಯ್ತಿ ಸಮಸ್ಯೆಯಿಂದ ಮುಕ್ತವಾಗುತ್ತದೆ, ಹಾಗೆಯೇ ಮೇಲಿನ ಹಂತದ ಅಧಿಕಾರಿಗಳು ಕೆಲಸ ಮಾಡಿದರೆ ಅವರವರ ವ್ಯಾಪ್ತಿಯ ತಾಲೂಕು, ಜಿಲ್ಲೆ ಸಮಸ್ಯೆಗಳಿಂದ ಮುಕ್ತವಾಗುತ್ತದೆ ಎನ್ನುವ ಡಾ. ಹೆಚ್.ಎಲ್ ನಾಗರಾಜ್ ನುಡಿದಂತೆ ನಡೆಯುತ್ತಿದ್ದಾರೆ. ಕಂದಾಯ ಅದಾಲತ್ ಹಾಗೂ ತೆರೆದ ನ್ಯಾಯಾಲಯಗಳ ಮೂಲಕ 30,000 ಪ್ರಕರಣಗಳನ್ನು ವಿಲೇವಾರಿ ಮಾಡಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ತನ್ನ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರ್ಕಾರಿ ಕೆರೆಗಳ ಒತ್ತುವರಿ, ಅಕ್ರಮ ಮರಳು ಸಾಗಾಣೆ, ಅಕ್ರಮ ಗಣಿಗಾರಿಕೆ ತಡೆದು, ಸಾರ್ವಜನಿಕ ಆಸ್ತಿ ಕಬಳಿಕೆ ಮಾಡುವ ತಪ್ಪಿತಸ್ಥರಿಗೆ ಹಾಗೂ ಅದಕ್ಕೆ ಸಹಕಾರ ನೀಡುವ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ.

ಸರ್ಕಾರಿ ಕೆಲಸದ ಜೊತೆಗೆ ಹಾಸನದ ಹಸಿರು ಭೂಮಿ ಪ್ರತಿಷ್ಠಾನ (ರಿ) ಗೌರವಾಧ್ಯಕ್ಷರಾಗಿ 20ಕ್ಕೂ ಹೆಚ್ಚು ಕೆರೆ 50ಕ್ಕೂ ಹೆಚ್ಚು ಪುಷ್ಕರಣಿಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ಹಾಸನದ ಪುರದಮ್ಮ, ಚನ್ನರಾಯಪಟ್ಟಣದ ಶ್ರೀ ನವಿಲೆ ನಾಗೇಶ್ವರ ದೇವಾಲಯ ಸೇರಿದಂತೆ ಹತ್ತಾರು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ, ಎಂ.ಫಿಲ್ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ನಾಗರಾಜ್, ಅರ್ಥಶಾಸ್ತ್ರದ ಮೂಲಾಂಶಗಳು ಕೃತಿ, ಕೆಎಎಸ್ ಪರೀಕ್ಷೆಗಾಗಿ ಸಾಮಾನ್ಯ ಜ್ಞಾನ ಪುಸ್ತಕ, ಯುವಕರಿಗಾಗಿ ಬುದ್ದಿ ಮಾತು ಪುಸ್ತಕ, ರೈತರಿಗಾಗಿ ಕಂದಾಯ ಕಳಕಳಿ ಪುಸ್ತಕಗಳನ್ನು ಬರೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿರುವವರಿಗೆ ಹಾಸನದ ಬಿಜಿಎಸ್ ಸ್ಟಡಿ ಸರ್ಕಲ್, ಮೈಸೂರಿನ ಜ್ಞಾನ ಬುತ್ತಿ ತರಬೇತಿ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಗಳ ತರಭೇತಿ ಕೇಂದ್ರಗಳಲ್ಲಿ ಉಚಿತ ತರಬೇತಿಯನ್ನು ನೀಡುತ್ತಿದ್ದಾರೆ. 

2012 ರಲ್ಲಿ ಮಂಡ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಂಡ್ಯ ಜಿಲ್ಲಾ ಸರ್ವೋತ್ತಮ ಪ್ರಶಸ್ತಿ, 2013ರಲ್ಲಿ ಮುಖ್ಯಮಂತ್ರಿಗಳ ರಜತ ಪದಕ, 2017 ರಲ್ಲಿ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ, 2015 ರಲ್ಲಿ ಹಾಸನ ಜಿಲ್ಲಾ ಸರ್ವೋತ್ತಮ ಪ್ರಶಸ್ತಿ, 2019 ರಲ್ಲಿ ಅಖಿಲ ಭಾರತ ಸಾಹಿತ್ಯ ಪುರಸ್ಕಾರ, 2021 ರಲ್ಲಿ ಚಿಕ್ಕಮಗಳೂರು ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ, ಕಂದಾಯ ಇಲಾಖೆಯ ಶೂನ್ಯ ಬಾಕಿ ಅಭಿನಂದನಾ ಪತ್ರವನ್ನು ಇವರು ಪಡೆದಿದ್ದಾರೆ.

ನಾಗರೀಕ ಸೇವೆಯ ಜೊತೆಗೆ ಧಾರ್ಮಿಕ ಕ್ಷೇತ್ರದಲ್ಲಿಯೂ ಶ್ರದ್ಧೆ ಹೊಂದಿರುವ ಡಾ. ನಾಗರಾಜ್ ಹಿಂದೊಮ್ಮೆ ಸರ್ಕಾರಿ ಸೇವೆ ತೊರೆದು ಆದಿಚುಂಚನಗಿರಿ ಶ್ರೀ ಮಠದ ಹಿಂದಿನ ಪೀಠಾಧಿಪತಿಗಳಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಬಳಿ ಸನ್ಯಾಸ ದೀಕ್ಷೆ ಪಡೆದಿದ್ದರು. ಆಗ ಇದರಿಂದ ಮನನೊಂದ ಅವರು ಸೇವೆ ಸಲ್ಲಿಸಿದ ತಾಲೂಕುಗಳ ಜನ ಪ್ರತಿಭಟನೆ, ಧರಣಿ, ಮೆರವಣಿಗೆ ನಡೆಸಿ ಕರ್ಥವ್ಯಕ್ಕೆ ಮರಳಿ ಹಾಜರಾಗುವಂತೆ ಒತ್ತಡ ಹೇರಿದ್ದರು.

-ಪ್ರಸನ್ನ ಕುಮಾರ್ ಕಿಬ್ಳಿ

ಬರವಣಿಗೆಯಲ್ಲಿ ನಿಮಗೆ ಆಸಕ್ತಿ ಇದೆಯೇ? ನೀವೂ ಬರೆಯಬಹುದು..

ನೀವು ಬರೆಯುವ ಕಥೆ, ಲೇಖನ, ಪ್ರವಾಸಿ ಕಥನ, ಪುಣ್ಯ ಕ್ಷೇತ್ರದ ಕುರಿತು ಮಾಹಿತಿ, ಸಾಧಕ ವ್ಯಕ್ತಿ ಪರಿಚಯ ಅಥವಾ ಇನ್ಯಾವುದೇ ಪ್ರಕಟಿಸಲು ಯೋಗ್ಯವಾದ ಬರಹಗಳಿದ್ದರೆ ಅದಕ್ಕೆ ನ್ಯೂಸ್ ಮಲ್ನಾಡ್ ವೇದಿಕೆ ಕಲ್ಪಿಸಲಿದೆ. ನೀವು ಬರೆದದ್ದನ್ನು ಈ-ಮೇಲ್ ಅಥವಾ ವಾಟ್ಸಾಪ್ ಮೂಲಕ ನಮಗೆ ಕಳುಹಿಸಿಕೊಡಿ. ಅವುಗಳು ‘ಡಿಜಿಟಲ್ ಕಾಲಮ್’ ನಲ್ಲಿ ಪ್ರಕಟಗೊಳ್ಳಲಿವೆ.

ನಮ್ಮ ಈ-ಮೇಲ್ ವಿಳಾಸ : newsmalnadmedia@gmail.com

ನಮ್ಮ ವಾಟ್ಸಾಪ್ ಸಂಖ್ಯೆ : 7349040128