ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸದೆ ಇದ್ದಲ್ಲಿ ಹಾಗೂ ಬೇರೆ ವಾಹನಗಳಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ನ್ನು ಧರಿಸದೇ ಇದ್ದಾಗ ಪೊಲೀಸರು ದಂಡ ಹಾಕುವುದು ಮಾಮೂಲಿ ಆದರೆ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದವರನ್ನು ಅಡ್ಡಗಟ್ಟಿ ಅವರಿಗೆ ಸಿಹಿ ನೀಡಿ ತನ್ಮೂಲಕ ವಾಹನ ಸವಾರರಲ್ಲಿ ಪೊಲೀಸರು ಅರಿವು ಮೂಡಿಸಿರುವ ವಿಶೇಷ ಜಾಗೃತಿ ಅಭಿಯಾನ ಕೊಪ್ಪದಲ್ಲಿ ನಡೆದಿದೆ.

ಇದನ್ನೂ ಓದಿ : ಸ್ನೇಹಿತರೊಂದಿಗೆ ಫಾಲ್ಸ್ ಗೆ ತೆರಳಿದ್ದ ಯುವಕನ ಸಾವು

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಅವರ ನೇತೃತ್ವದ ಪೊಲೀಸರ ತಂಡ ಕೊಪ್ಪ ಪಟ್ಟಣದಲ್ಲಿ ನಿಂತು ಹೆಲ್ಮೆಟ್ ಧರಿಸದೆ ಇದ್ದವರನ್ನು, ತ್ರಿಬಲ್ ರೈಡಿಂಗ್ ಮಾಡುವವರನ್ನು ಹಾಗೂ ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವವರು ಸೇರಿದಂತೆ ರಸ್ತೆ ನಿಯಮಾವಳಿಗಳನ್ನು ಉಲ್ಲಂಘಿಸಿ ವಾಹನ ಸಂಚಾರ ನಡೆಸುತ್ತಿದ್ದವರನ್ನು ಅಡ್ಡಗಟ್ಟಿ ಅವರಿಗೆ ಸಿಹಿ ನೀಡಿ ಕೇಸು ದಾಖಲಿಸದೆ ಅವರ ತಪ್ಪಿನ ಕುರಿತು ಎಚ್ಚರಿಸುವ ಹಾಗೂ ನಿಯಮಗಳನ್ನು ತಿಳಿಸುವ ಕೆಲಸವನ್ನು ಈ ಪೊಲೀಸರ ತಂಡ ನಡೆಸಿತು.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪಘಾತಗಳನ್ನು ಗಮನಿಸಿದಾಗ ಚಾಲಕರಿಗಿಂತ ಸಹ ಪ್ರಯಾಣಿಕರು ಗಂಭೀರ ಗಾಯಗಳಿಗೊಳಪಡುತ್ತಿದ್ದಾರೆ. ಕೇವಲ ಪೊಲೀಸರ ಹೆದರಿಕೆಯಿಂದ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೇ, ಸುರಕ್ಷತೆಯ ದೃಷ್ಟಿಯಿಂದಾಗಿ ಸೀಟ್ ಬೆಲ್ಟ್ ಧರಿಸಬೇಕು. ಸಾರ್ವಜನಿಕರ ಹಿತದೃಷ್ಟಿಯ ಸಲುವಾಗಿ ಈ ಕಾರ್ಯವನ್ನು ನಡೆಸಲಾಗಿದೆ - ಶ್ರೀನಾಥ್ ರೆಡ್ಡಿ, ಕೊಪ್ಪ ಠಾಣಾ ಪಿಎಸೈ

ರಸ್ತೆ ನಿಯಮಾವಳಿಗಳನ್ನು ಮೀರಿದವರ ಮೇಲೆ ಕೇಸ್ ದಾಖಲಿಸಿ ಫೈನ್ ಹಾಕುವುದು ಮಾಮೂಲಿಯಾಗಿದೆ ಆದರೆ ಅವರ ತಪ್ಪಿನ ಕುರಿತು ಅರಿವು ಮೂಡಿಸಿ ಎಂತಹುದೇ ಪರಿಸ್ಥಿತಿ ಇದ್ದರೂ ಕೂಡ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸುವಂತೆ ಹಾಗೂ ವಾಹನಗಳಲ್ಲಿ ತೆರಳುವ ಸಂದರ್ಭದಲ್ಲಿ ಮೊಬೈಲ್ ಫೋನಿನಲ್ಲಿ ಮಾತನಾಡದಂತೆ ಪೊಲೀಸರು ತಿಳಿಹೇಳಿ ಅವರಿಗೆ ಸಿಹಿ ಹಂಚಿ ವಿಶಿಷ್ಟವಾಗಿ ಚಾಲಕರಿಗೆ ರಸ್ತೆ ನಿಯಮದ ಕುರಿತು ಅರಿವು ಮೂಡಿಸಿದರು. 

ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಕೂಡ ಉತ್ತಮವಾಗಿ ಸ್ಪಂದಿಸಿದ್ದು ನಿಯಮ ಉಲ್ಲಂಘನೆಯ ಕುರಿತು ಮಾಹಿತಿ ನೀಡಿ ಒಂದು ಹೊಸ ವಿಶಿಷ್ಟವಾದ ಅಭಿಯಾನವನ್ನು ನಡೆಸಿದ ಅಧಿಕಾರಿಗಳ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.