ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಪೊಲೀಸರು ಹೊಟ್ಟೆ ಕರಗಿಸಿ ಫಿಟ್ ಅಂಡ್ ಫೈನ್ ಆದಲ್ಲಿ ಅವರಿಗೆ ವಿಶೇಷ ಬಹುಮಾನ ನೀಡುವುದಾಗಿ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಅವರು ಘೋಷಿಸಿದ್ದಾರೆ. 

ಈ ಕುರಿತು ಮಾತನಾಡಿದ ಅವರು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸರು ಫಿಟ್ ಆಗಿದ್ದಲ್ಲಿ  ಅವರ ಕಾರ್ಯಕ್ಷಮತೆ ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿದೆ, ಇದಲ್ಲದೇ ಉತ್ತಮ ಆರೋಗ್ಯಕ್ಕೆ ದೇಹದ ಸಮತೋಲನ ಅತ್ಯಗತ್ಯ ಆದ ಕಾರಣ ಜಿಲ್ಲೆಯ 28 ಠಾಣೆಗಳ ಪೊಲೀಸರಿಗೆ ಮೌಖಿಕವಾಗಿ ಈ ಕುರಿತು ಆದೇಶ ನೀಡಲಾಗಿದೆ ಎಂದರು. 

ಇದನ್ನೂ ಓದಿ : ಮೂಡಿಗೆರೆ ಶಾಸಕನ ಡಬಲ್ ಗೇಮ್ | ತಾನೇ PSI ರವೀಶ್ ನಿಯುಕ್ತಿಗೊಳಿಸುವಂತೆ ಕೋರಿದ್ದ ಪತ್ರ ವೈರಲ್

ಲಾಕ್ ಡೌನ್ ನ ಅವಧಿಯಲ್ಲಿ ಜನರಿಗಾಗಿ ದುಡಿದ ಪೊಲೀಸರು ಸರಿಯಾದ ಸಮಯಕ್ಕೆ ಊಟ ತಿಂಡಿ, ನಿದ್ರೆಯನ್ನು ಮಾಡದೇ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಈ ಅವಧಿಯು ಇಲಾಖೆಯ ಅನೇಕ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು. ಆದ ಕಾರಣ ಪೊಲೀಸರಿಗೆ ಈ ವಿಶಿಷ್ಟ ಟಾಸ್ಕ್ ನೀಡುವ ಮೂಲಕ ಆರೋಗ್ಯ ಹಾಗೂ ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದರು. 


ತೂಕ ಇಳಿಸಿಕೊಂಡು ಫಿಟ್ ಆದವರಿಗೆ ವಿಶೇಷ ಬಹುಮಾನ : 

ದೇಹಕ್ಕೆ ತಕ್ಕಂತೆ ತೂಕವನ್ನ ಇಳಿಸಿಕೊಂಡ ಪೊಲೀಸರನ್ನು ಗುರುತಿಸಿ ಅವರಿಗೆ ಬಹುಮಾನ ನೀಡಲಾಗುವುದು ಎಂದು ಎಸ್ಪಿ ಅಕ್ಷಯ್ ಹಾಕೆ ಅವರು ತಿಳಿಸಿದ್ದು ಬಹುಮಾನ ಏನೆಂದು ಈ ವರೆಗೆ ಬಹಿರಂಗಪಡಿಸಿಲ್ಲ.

ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೆಬೆಲ್ ಆಗಿ ಕಾರ್ಯನಿರ್ವಹಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಹೊಟ್ಟೆ ಕರಗಿಸಿ ಫಿಟ್ ಆದ ಅಧಿಕಾರಿಗಳಿಗೆ ಅವರಿಚ್ಛಿಸಿದ ಸ್ಥಳಗಳಿಗೆ ವರ್ಗಾವಣೆ ಮಾಡುವ ಭರವಸೆಯನ್ನು ನೀಡಿದ್ದರು ಹಾಗೂ ವರ್ಗ ಮಾಡಿದ್ದರು. ಈ ರೀತಿಯಾದ ಯಾವುದಾದರೂ ಗಿಫ್ಟ್ ಪೊಲೀಸರಿಗೆ ದೊರೆಯಲಿದೆಯೇ ಎಂದು ಕಾದು ನೋಡಬೇಕಿದೆ. ಅಂತೆಯೇ ಬಿಡುವಿನ ವೇಳೆಯಲ್ಲಿ ಅನೇಕರು ಉತ್ಸಾಹದಿಂದ ವ್ಯಾಯಾಮ ಕಸರತ್ತುಗಳಲ್ಲಿ ಬ್ಯುಸಿಯಾಗಿದ್ದರೆ ಇನ್ನೂ ಕೆಲವರು ಯಾವ ರೀತಿಯ ಬಹುಮಾನ ದೊರೆಯಬಹುದೆಂದು ಕೌತುಕದಿಂದ ಕಾಯುತ್ತಿದ್ದಾರೆ.