ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ನಿವಾಸಿಯೋರ್ವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿ ಮನೆಯಲ್ಲಿದ್ದ ವಸ್ತುಗಳನ್ನು ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಘ್ರವಾಗಿ ತನಿಖೆಯಾಗಬೇಕು ಹಾಗೂ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶೃಂಗೇರಿ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಉಳುವಳ್ಳಿ ಗ್ರಾಮದ ಹಂದಿಗೋಡು ನಿವಾಸಿ ಸುಧಾಕರ ಎಂಬುವವರ ಮನೆಗೆ, ಕೊಟ್ಟಿಗೆಗೆ ಹಾಗೂ ನಿಲ್ಲಿಸಿದ್ದ ವಾಹನಕ್ಕೆ ಮಾರ್ಚ್ 19 ರಂದು ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆಯಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಸಂಬಂಧ ದೂರು ದಾಖಲಾಗಿದ್ದರೂ ಕೂಡ ಈ ವರೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಒದಗಿಸಿಲ್ಲ ಈ ಪ್ರಕರಣದ ಆರೋಪಿಗಳನ್ನು ತ್ವರಿತಗತಿಯಲ್ಲಿ ಬಂಧಿಸಿ ಅವರ ಮೇಲೆ ಸೂಕ್ತ ಕ್ರಮಗಳನ್ನು ಜರುಗಿಸಬೇಕೆಂದು ಆಗ್ರಹಿಸಿ ಉಳುವಳ್ಳಿಯ ಗ್ರಾಮಸ್ಥರು ಇಂದು ಶೃಂಗೇರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ಅವರಿಗೆ ಮನವಿ ಸಲ್ಲಿಸಿದರು.
ಪ್ರಕರಣದ ಕುರಿತು ತನಿಖೆ ಈಗಾಗಲೇ ಆರಂಭವಾಗಿದ್ದು ಅನುಮಾನವಿದ್ದ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ, ತನಿಖೆ ನಡೆಯುತ್ತಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು - ರವಿ ಬಿ.ಎಸ್ ವೃತ್ತ ನಿರೀಕ್ಷಕರು, ಶೃಂಗೇರಿ ಪೊಲೀಸ್ ಠಾಣೆ
ಈ ಘಟನೆಯಿಂದ ಗ್ರಾಮಸ್ಥರು ಅತೀವ ಆತಂಕಕ್ಕೀಡಾಗಿದ್ದು, ಮಲೆನಾಡು ಭಾಗದಲ್ಲಿ ಮನೆಗಳು ಬಹಳಷ್ಟು ಅಂತರದಿಂದ ಕೂಡಿರುತ್ತದೆ, ಈ ಆರೋಪಿಗಳಿಗೆ ಶೀಘ್ರವೇ ಶಿಕ್ಷೆಯಾಗದೇ ಹೋದಲ್ಲಿ ವೈಯಕ್ತಿಕ ದ್ವೇಷವನ್ನಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಈ ರೀತಿಯ ಕೃತ್ಯಗಳನ್ನು ಬೇರೆಯವರು ನಡೆಸುವ ಸಾಧ್ಯತೆಗಳಿರುತ್ತವೆ. ಈ ತಪ್ಪನ್ನು ಮಾಡಿದವರಿಗೆ ಕಾನೂನು ಚೌಕಟ್ಟಿನಡಿಯಲ್ಲಿ ಕಠಿಣವಾದ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು, ಜನಪ್ರತಿನಿಧಿಗಳು, ನಾಗರೀಕರು ಸೇರಿದಂತೆ ಸಾರ್ವಜನಿಕರು ಇದ್ದರು.



0 Comments