ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಪ್ರೀತಿಸುವಂತೆ ಯುವಕನೋರ್ವ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೇ ಕೀಟನಾಶಕ ಸೇವಿಸಿ ಯುವತಿಯು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಶೃಂಗೇರಿ : ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಟೆಂಪೋ ಟ್ರಾವೆಲರ್ ವಾಹನ ; ಓರ್ವ ವ್ಯಕ್ತಿಯ ದುರ್ಮರಣ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಈಶ್ವರಪ್ಪ ಗೌಡ ಎಂಬುವವರ ಪುತ್ರಿ ವಿದ್ಯಾಶ್ರೀ ಗೆ ಪ್ರತಿದಿನವೂ ನೆರೆಮನೆಯ ಯುವಕನಾದ ಪ್ರಶಾಂತ್ ಎಂಬಾತ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ ಹಾಗೂ ಆತನ ಕಿರುಕುಳ ತಾಳಲಾರದೆ ಕಾಲೇಜಿಗೆ ತೆರಳುತ್ತಿದ್ದ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಏಪ್ರಿಲ್ ತಿಂಗಳ 19 ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆಕೆಯನ್ನು ಕುಟುಂಬಸ್ಥರು ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದರು ನಂತರದಲ್ಲಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆಕೆಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇಷ್ಟು ದಿನಗಳಕಾಲ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆಕೆಯು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾಶ್ರೀ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಪೊಲೀಸ್ ಠಾಣೆಗೆ ಆಕೆಯ ಸಹೋದರ ದೂರು ದಾಖಲಿಸಿದ್ದಾರೆ. ಪ್ರಶಾಂತ್ ಎಂಬಾತ ವಿದ್ಯಾಶ್ರೀ ಗೆ ಮೊಬೈಲ್ ಮೂಲಕ ಹಾಗೂ ಕಾಲೇಜಿಗೆ ಹೋಗಿ ಬರುವ ಸಮಯದಲ್ಲಿ ಹಿಂಬಾಲಿಸಿ ಮಾನಸಿಕ ಕಿರುಕುಳ ನೀಡಿರುತ್ತಾನೆ ಆತನನ್ನು ವಶಕ್ಕೆ ಪಡೆದುಕೊಂಡು ಸೂಕ್ತ ತನಿಖೆ ನಡೆಸಿ ಕಠಿಣಶಿಕ್ಷೆ ವಿಧಿಸಬೇಕೆಂದು ದೂರನ್ನು ದಾಖಲು ಮಾಡಲಾಗಿದೆ.
ಘಟನೆಯ ಸಂಬಂಧ ಆಕೆಯ ಪೋಷಕರು, ಕುಟುಂಬವರ್ಗ, ಸ್ನೇಹಿತರು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಈ ಸಾವಿನ ಕುರಿತಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.



0 Comments