ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ರಜೆ ಮುಗಿಸಿ ಶಾಲೆಗಳು ಆರಂಭವಾದ ಕಾರಣ ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳುವ ಸಲುವಾಗಿ ವಿಶೇಷವಾಗಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ : ಮೂಡಿಗೆರೆ : ಭಾರೀ ಮಳೆಗೆ ರಸ್ತೆಗುರುಳಿದ ಬೃಹದಾಕಾರಾದ ಮರ ; ಒಂದು ಗಂಟೆಗೂ ಅಧಿಕ ಸಮಯದಿಂದ ರಸ್ತೆ ಸಂಚಾರ ಸ್ಥಗಿತ
ಶೃಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ ಇಲ್ಲಿಗೆ ಮಕ್ಕಳನ್ನು ಬರಮಾಡಿಕೊಳ್ಳುವ ಸಲುವಾಗಿ ಶಾಸಕ ಟಿ.ಡಿ ರಾಜೇಗೌಡ ಅವರು ಶಾಲೆಗೆ ಆಗಮಿಸಿ ಮಕ್ಕಳನ್ನು ಸ್ವಾಗತಿಸಿದರು. ಇಂದಿನಿಂದ ಆರಂಭವಾದ 2022 - 23 ನೆಯ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಅವರು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಳ್ಳುತ್ತಿದ್ದಾರೆ, ಸರ್ಕಾರಿ ಶಾಲೆಗಳನ್ನು ಪೋಷಣೆ ಮಾಡುವಲ್ಲಿ ಸ್ವಇಚ್ಛೆಯಿಂದ ಪೋಷಕರು ಹಾಗೂ ಶಿಕ್ಷಕರು ಹೆಚ್ಚಿನ ಮುತುವರ್ಜಿವಹಿಸಿ ಕಾರ್ಯ ಪ್ರವೃತ್ತರಾಗಬೇಕು ತನ್ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಶಾಲೆಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪುಷ್ಪ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಆತ್ಮೀಯವಾಗಿ ಶಿಕ್ಷಕರು ಬರಮಾಡಿಕೊಂಡರು. ಅಂತೆಯೇ ಶೃಂಗೇರಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ವೃಂದದವರು ಶಾಲೆಯನ್ನು ಅಚ್ಚುಕಟ್ಟಾಗಿ ತಳಿರು ತೋರಣಗಳಿಂದ ಸಿಂಗರಿಸಿ ಶುಭಕೋರುವ ಬ್ಯಾನರ್ ಗಳನ್ನು ಅಳವಡಿಸಿ ಅಭೂತಪೂರ್ವವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಶಾಲಾ ಪ್ರಾರಂಭೋತ್ಸವದ ದಿನವಾದ 16.05.2022 ರ ಸೋಮವಾರ ದಂದು ಮಕ್ಕಳೂ ಕೂಡ ಅತ್ಯಂತ ಹೆಚ್ಚಿನ ಉತ್ಸುಕತೆಯಿಂದ ಶಾಲೆಗೆ ಆಗಮಿಸಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾನಗರ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ ರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.




0 Comments