ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಚಾಲನೆ ಮಾಡುವ ಸಂದರ್ಭದಲ್ಲಿ ಹಸು ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಸವಾರ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ರೇಣುಕನಗರದ ಮಣಿಕಂಠ (33) ಮೃತ ದುರ್ದೈವಿ. ನರಸಿಂಹರಾಜಪುರ - ಶಿವಮೊಗ್ಗ ಮಾರ್ಗವಾಗಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು ರಸ್ತೆಗೆ ಅಡ್ಡಬಂದ ಹಸುವನ್ನು ತಪ್ಪಿಸಲು ಹೋಗಿ ಬೈಕ್ ಸವಾರ ಬ್ರೇಕ್ ಹೊಡೆದಿದ್ದು ಈ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಆತನ ತಲೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾದ ಪರಿಣಾಮ ಮಣಿಕಂಠ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ : ಗುಂಡೇಟಿಗೆ ಬಲಿಯಾದ ಗಂಡಾನೆ ; ತೋಟದಲ್ಲಿ ಆನೆಯ ಶವಪತ್ತೆ 

ಅಪಘಾತದ ಕುರಿತಾಗಿ ಮೃತ ಮಣಿಕಂಠ ಅವರ ಸಹೋದರ ರಂಜಿತ್ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಕಳೆದುಕೊಂಡಿರುವ ಕುಟುಂಬಸ್ಥರು ಹಾಗೂ ಸ್ನೇಹಿತರು ದುಃಖ ವ್ಯಕ್ತಪಡಿಸಿದ್ದಾರೆ.

ಶೃಂಗೇರಿ/ಕೊಪ್ಪ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 218 ಮರಗಳ ಕಡಿತಕ್ಕೆ ಸಾರ್ವಜನಿಕ ಅಭಿಪ್ರಾಯಕ್ಕೆ ಸಭೆ : 

ಚಿಕ್ಕಮಗಳೂರು ಜಿಲ್ಲೆಯ  ಕೊಪ್ಪದ DFO ಕಚೇರಿಯಲ್ಲಿ ಶೃಂಗೇರಿಯ ರಾಷ್ಟ್ರೀಯ ಹೆದ್ದಾರಿ 169 ರ ಅಗಲೀಕರಣ ವಿಚಾರವಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ಕರೆಯಲಾಗಿತ್ತು.

ಚತುಷ್ಪಥ ರಸ್ತೆ ನಿರ್ಮಾಣಕ್ಕೆ 218 ಮರಗಳು ಅಡ್ಡಲಾಗಿರುವುದರಿಂದ ಅದನ್ನು ಕಡಿಯಲು ಸಾರ್ವಜನಿಕರು ಹಾಗೂ ಅಧಿಕಾರಿಗಳ ಆಕ್ಷೇಪಣೆ ಇದ್ದಲ್ಲಿ ತಿಳಿಸುವಂತೆ ಹೇಳಲಾಗಿತ್ತು, ಆದರೆ ಇದೊಂದು ಕಾಟಾಚಾರದ ಸಭೆಯಂತೆ ಕಂಡುಬಂದಿತು.

ಈ ಸಭೆಯು ಅರಣ್ಯ ಇಲಾಖೆಯ ಡಿಎಫ್ಓ ಕಛೇರಿಯಲ್ಲಿ ನಡೆಯಿತಾದರೂ ಡಿ.ಎಫ್.ಓ ಅವರೇ ಸಭೆಯಲ್ಲಿ ಉಪಸ್ಥಿತರಿರಲಿಲ್ಲ, ಅವರ ಅನುಪಸ್ಥಿತಿಯಲ್ಲಿ ಎ.ಸಿ.ಎಫ್ ಅವರಾದರೂ ಭಾಗವಹಿಸಬೇಕಿತ್ತು ಆದರೆ ಅವರೂ ಸಹ ಇರಲಿಲ್ಲ.

ಸಭೆಯಲ್ಲಿ ಮರಗಳನ್ನು ಕಡಿಯಲು ಯಾವುದೇ ಆಕ್ಷೇಪಣೆ ಇಲ್ಲ, ಜನರಿಗೆ ರಸ್ತೆ ಅಗಲೀಕರಣ ಅವಶ್ಯಕವಾಗಿರುವುದರಿಂದ ಮರಗಳನ್ನು ಕಡಿಯಲು ನಮ್ಮ ಅನುಮತಿ ಇರುವುದಾಗಿ ಸಭೆಯಲ್ಲಿ ಭಾಗವಹಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಸಾರ್ವಜನಿಕರು ಸಹಿ ಹಾಕಿದರು. ಆದರೆ ಸಭೆಯ ನಿರ್ಣಯವನ್ನು ದಾಖಲಿಸಲು ಸರಿಯಾದ ವ್ಯವಸ್ಥೆ ಇಲ್ಲದೇ ಪುಸ್ತಕವೊಂದರ ಮೇಲೆ ಬರೆದು ಬಂದವರ ಸಹಿ ತೆಗೆದುಕೊಳ್ಳಲಾಗಿದೆ.

ಮರಗಳು ಅರಣ್ಯ ಇಲಾಖೆಯ ಸುಪರ್ದಿ, ಅವುಗಳನ್ನು ಕಡಿಯವ ಕುರಿತು ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೇ ಗೈರಾಗಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡುತ್ತದೆ.