ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕಾರು ಗುದ್ದಿದ ಪರಿಣಾಮ ಏಳು ಎಮ್ಮೆಗಳು ದಾರುಣವಾಗಿ ಅಂತ್ಯ ಕಂಡಿರುವ ದುರ್ಘಟನೆ ಭಾನುವಾರ ತಡರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗದ ಜಿಲ್ಲೆಯ ಗಾಡಿಕೊಪ್ಪದ ತುಂಗಾ ನಾಲೆ ಬಳಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಶಿವಮೊಗ್ಗದಿಂದ ಆಯನೂರು ಕಡೆಗೆ ಧಾವಿಸುತ್ತಿದ್ದ ಕಾರು, ರಸ್ತೆ ಮಧ್ಯದಲ್ಲಿ ಎಮ್ಮೆಗಳು  ಸಾಗುತ್ತಿರುವುದನ್ನು ಕಾಣದೇ ಗುದ್ದಿದ ಪರಿಣಾಮ ಏಳು ಎಮ್ಮೆಗಳು ಸ್ಥಳದಲ್ಲೇ ದಾರುಣವಾಗಿ ಅಂತ್ಯಕಂಡಿದೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಶೃಂಗೇರಿ ಯುವಕನ ದುರ್ಮರಣ

ಗುದ್ದಿದ ರಭಸಕ್ಕೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡ ಕಾರಣ ಕಾರಿನಲ್ಲಿದ್ದ ಇಬ್ಬರು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಸ್ತೆಯ ಮೇಲೆ ಅನಾಥವಾಗಿ ಎಮ್ಮೆಗಳ ಮೃತದೇಹ ಬಿದ್ದಿರುವ ದೃಶ್ಯವು ಮನಕಲುಕುವಂತಿದ್ದು ಅನೇಕ ದಾರಿಹೋಕರು ಘಟನೆಯ ಸಂಬಂಧ ಬೇಸರ ವ್ಯಕ್ತಪಡಿಸಿದ್ದಾರೆ. 

ಮೃತಪಟ್ಟಿರುವ ಎಮ್ಮೆಗಳ ಮಾಲೀಕರನ್ನು ಪತ್ತೆ ಮಾಡುವ ಕೆಲಸ ಆರಂಭವಾಗಿದ್ದು ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.