ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ನರಸಿಂಹರಾಜಾಪುರದ ತಾಲೂಕು ಕಛೇರಿಯಲ್ಲಿ ನಕಲಿ ದಾಖಲೆಗಳನ್ನು ಸೃಷಿಸಿದ ಆರೋಪದಡಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ : ಉದ್ಯಮಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಕಾರ್ ಅಪಘಾತ
ಎನ್.ಆರ್.ಪುರ ತಾಲೂಕು ಕಛೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪೌತಿ ಖಾತೆ ಮಾಡಿಕೊಟ್ಟ ಆರೋಪದಡಿಯಲ್ಲಿ ತಲೆ ಮರೆಸಿಕೊಂಡಿದ್ದ ತಾಲೂಕು ಕಚೇರಿ ಸಿಬ್ಬಂದಿ ಅಣ್ಣಪ್ಪನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಲೆ ಮರೆಸಿಕೊಂಡಿದ್ದ ಅಣ್ಣಪ್ಪ ಮೊಬೈಲ್ ಸ್ಟೇಟಸ್‌ನಲ್ಲಿ ನಾನೇ ರಾಜ, ನನ್ನನ್ನು ಗೆಲ್ಲುವವರು ಯಾರೂ ಇಲ್ಲ, ನನಗೆ ನಾನೇ ರಾಜ, ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ಸವಾಲು ಎಸೆಯುವ ರೀತಿಯಲ್ಲಿ ಹಾಕಿದ್ದ. ಆತನ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಬೆನ್ನು ಹತ್ತಿದ್ದ ಪೊಲೀಸರು ಅಣ್ಣಪ್ಪನನ್ನು ಬಾಳೆಕೊಪ್ಪ ಸಮೀಪದಲ್ಲಿ ಬಂಧಿಸಿ ಶನಿವಾರ ರಾತ್ರಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಇನ್ನೊಂದು ಪ್ರಕರಣದಲ್ಲಿ ಸಂಬಂಧಿಕರ ಆಸ್ತಿಯನ್ನು ಬೇರೆ ಹೆಸರಿಗೆ ಖಾತೆ ಮಾಡಿಸಿಕೊಂಡ ಆರೋಪದಲ್ಲಿ ಪರಾರಿಯಾಗಿದ್ದ ಎಲಿಯಾಸ್‌ನನ್ನೂ ಪೊಲೀಸರು ಶುಕ್ರವಾರ ಕೊಪ್ಪ ಸಮೀಪದ ಹೆಗ್ಗಾರುಕುಡಿಗೆಯಲ್ಲಿ ಬಂಧಿಸಿದ್ದಾರೆ.
ನರಸಿಂಹರಾಜಪುರ ತಾಲೂಕು ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇಂಬಳಗಳಿಗಿಂತ ಹೆಚ್ಚಾಗಿ ಅಧಿಕಾರಿಗಳು ಸಾಮಾನ್ಯವರ್ಗದ ಜನರ ರಕ್ತ ಹೀರುತ್ತಿದ್ದಾರೆ ಎಂದು ಆರೋಪಿಸಿ ಈ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
ಈ ಕಾರ್ಯಾಚರಣೆಯು ಪಿಎಸೈ ವಿ. ಟಿ ದಿಲೀಪ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಿತು ಕಾರ್ಯಾಚರಣೆಯಲ್ಲಿ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.




0 Comments