ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಆನೆ ದಾಳಿಯು ಸಂಭವಿಸುತ್ತಿದ್ದು ಇಂದು ಬೆಳಗ್ಗಿನ ಸಮಯದಲ್ಲಿ ಆನೆಗಳ ಹಿಂಡು ರಸ್ತೆ ಸಮೀಪದಲ್ಲಿ ಕಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹಾಂದಿ ಸಮೀಪದ ರಸ್ತೆಯಲ್ಲಿ ಆನೆಗಳ ಗುಂಪು ಪ್ರತ್ಯಕ್ಷವಾಗಿದೆ. ಈ ಭಾಗದ ತೋಟಗಳಲ್ಲಿ ಆನೆಗಳು ಪ್ರತ್ಯಕ್ಷವಾಗಿದ್ದು ಆನೆಯ ದಾಳಿಯಿಂದ ಬೆಳೆ ನಾಶವಾಗಿದೆ. ಗುಂಪು ಗುಂಪಾಗಿ ಆನೆಗಳು ಈ ಭಾಗದಲ್ಲಿ ಅತ್ತಿಂದಿತ್ತ ಸಂಚಾರ ನಡೆಸುತ್ತಿದ್ದು ಗ್ರಾಮಸ್ಥರು ಆತಂಕದಿಂದ ದಿನಕಳೆಯುವಂತಾಗಿದೆ.
ತೋಟದಲ್ಲಿ ಕೆಲಸ ಮಾಡುವ ಕೃಷಿಕರು ಭಯದಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ವಾಹನಗಳಲ್ಲಿ ತೆರಳುತ್ತಿದ್ದ ಕೆಲವರು ಆನೆಗಳು ಅತ್ತಿಂದಿತ್ತ ಸಂಚಾರ ನಡೆಸುವ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಆನೆದಾಳಿಯ ಕುರಿತಾಗಿ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು, ಆನೆ ದಾಳಿಯಿಂದ ಹಾನಿಗೀಡಾದ ತೋಟಗಳಿಗೆ ಸೂಕ್ತ ಹಾಗೂ ಸಮರ್ಪಕವಾದ ಪರಿಹಾರವನ್ನು ಶೀಘ್ರವಾಗಿ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




0 Comments