ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರಿನಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ, ಪ್ರತಿದಿನದಂತೆ ದಿನಾಂಕ 09.ಮೇ ರಂದು ರಾತ್ರಿ ಸಮಯ ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಕೆಕೆಬಿ ಬಸ್ ಕಂಡಕ್ಟರ್ ಮಂಜುನಾಥ್ ಎಂಬುವವರನ್ನು ಅಡ್ಡ ಹಾಕಿ ಪೊಲೀಸ್ ಸಿಬ್ಬಂದಿ ಓರ್ವರು ಏಕಾಏಕಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವು ಬಾಳೆಹೊನ್ನೂರಿನಲ್ಲಿ ಕೇಳಿಬಂದಿದೆ.

ಯಾರನ್ನೋ ಫಾಲೋ ಮಾಡಿಕೊಂಡು ಬಂದ ಸಿಬ್ಬಂದಿ ಓರ್ವರು ಇವರ ಮೇಲೆ ಏಕಾಏಕಿ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾರೆ. ಅಲ್ಲೇ ಇದ್ದ ಹೋಂಗಾರ್ಡ್ ಇವರಲ್ಲ, ಇವರು ಸ್ಥಳೀಯ ಕಂಡಕ್ಟರ್ ಎಂದರೂ ಸಹ ಲೋಕಲ್ ಆದರೆ ನನಗೇನು ಯಾವ ಸೂ..ಮಗ ಆಗಿದ್ದರೆ ಆಗಿರಲಿ ಎಂದಿದ್ದಾನೆ. ಹಲ್ಲೆಗೊಳಗಾದವರು ಸಧ್ಯ ನಡೆಯಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ.


ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಿತ್ತುಕೊಂಡು ತಾಯಿಯ ಬಗ್ಗೆ ಅವ್ಯಾಚ್ಯವಾಗಿ ನಿಂದನೆ: ಪೊಲೀಸ್ ಠಾಣೆ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ವೀಡಿಯೊ ಚಿತ್ರೀಕರಣ ಮಾಡುವುದು ಕಾನೂನಿನ ಉಲ್ಲಂಘನೆ ಆಗುವುದಿಲ್ಲ, ಇದನ್ನು ಸುಪ್ರೀಂಕೋರ್ಟ್ ಸಹ ಹೇಳಿದೆ. ಈ ಘಟನೆಯಲ್ಲಿ ಹಲ್ಲೆಗೊಳಗಾದವರು ತಮ್ಮ ತಾಯಿ ಹಾಗೂ ತಮ್ಮನ ಜೊತೆಗೆ ದೂರು ನೀಡಲು ರಾತ್ರಿ ಪೊಲೀಸ್ ಠಾಣೆಗೆ ತೆರಳಿದ್ದಾರೆ, ದೂರು ನೀಡಿದರೂ ಅದಕ್ಕೆ ಸ್ವೀಕೃತಿ ಪತ್ರ ನೀಡಿಲ್ಲ ಅಷ್ಟಲ್ಲದೇ ಹಲ್ಲೆ ನಡೆಸುವಾಗ ಬಳಸಿದ ಬೈಕ್‌ ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಿದ್ದ ಪ್ರಕ್ರಿಯೆಯ ವೀಡಿಯೋ ಮಾಡುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಓರ್ವ ಕೈಯಿಂದ ಮೊಬೈಲ್ ಕಿತ್ತುಕೊಂಡು ವೀಡಿಯೊ ಡಿಲೀಟ್ ಮಾಡಿ ಸಾಕ್ಷ್ಯನಾಶ ಮಾಡಿದ್ದಲ್ಲದೇ ವೀಡಿಯೊ ಮಾಡಿದ್ದಕ್ಕಾಗಿ ಎಲ್ಲವನ್ನೂ ವೀಡಿಯೊ ಮಾಡುತ್ತೀಯಾ ಎಂದು ಹಲ್ಲೆಗೊಳಗಾದವರ ತಾಯಿಯ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಆಘಾತಗೊಂಡ ತಾಯಿಯು ಹೊರಬಂದಾಗ ಅಲ್ಲೇ ಕುಸಿದು ಬಿದ್ದಿದ್ದಾರೆ.

ಚಿಕ್ಕಮಗಳೂರು ಎಸ್ಪಿಯ ಚಾಲೆಂಜ್ :

ಚಿಕ್ಕಮಗಳೂರು ಎಸ್ಪಿ ಅವರು ಕೆಲವು ದಿನಗಳ ಹಿಂದಷ್ಟೇ ಪೊಲೀಸರಿಗೆ ಬೊಜ್ಜು ಕರಗಿಸುವ ಚಾಲೆಂಜ್ ನೀಡಿದ್ದರು, ಆದರೆ ಈ ಘಟನೆಯನ್ನು ನೋಡಿದಾಗ ಬಾಳೆಹೊನ್ನೂರು ಪೊಲೀಸರು ಅಮಾಯಕರ ಮೇಲೆ ಹಲ್ಲೆ ನಡೆಸಿ ಬೊಜ್ಜು ಕರಗಿಸುವ ಟಾಸ್ಕ್ ಪ್ರಾರಂಭಿಸಿದ್ದಾರಾ ಎನಿಸುತ್ತಿದೆ.

ಇದೇನಾ ಜನಸ್ನೇಹಿ ಪೊಲೀಸ್:

ಕುಡಿದು ಅಮಾಯಕನ ಮೇಲೆ ಹಲ್ಲೆ ಮಾಡುವುದು, ಪೋಲಿಸ್ ಠಾಣೆಗೆ ಬಂದವರ ಮೇಲೆ ಮೊಬೈಲ್ ಕಿತ್ತುಕೊಂಡು ದಾದಾಗಿರಿ ಮಾಡುವುದು, ಮಹಿಳೆಯರ ಬಗ್ಗೆ ಅವ್ಯಾಚ್ಯ ಪದ ಬಳಸುವುದು, ಇದೇನಾ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಂದು ಜನರು ಪ್ರಶ್ನಿಸುವಂತಾಗಿದೆ. 

ಪೊಲೀಸರು ಎಂದರೆ ಹಗಲು ರಾತ್ರಿ ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಾರೆ, ಕಡಿಮೆ ಸಂಬಳ ಹೆಚ್ಚಿನ ಕೆಲಸದ ಒತ್ತಡ ಈ ನಡುವೆಯೂ ಹತ್ತು ಹಲವು ಹೆಚ್ಚಿನ ಕೆಲಸಗಳು ಆದರೆ ಇಲಾಖೆ ಒಳಗಿರುವ ಇಂತಹ ಕೆಲವೇ ಕೆಲವರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಉನ್ನತ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಪೊಲೀಸ್ ಇಲಾಖೆಯ ಘನತೆಯನ್ನು ಕಾಪಾಡಬೇಕು ಹಾಗೂ ಜನರಲ್ಲಿ ಇಲಾಖೆಯ ಬಗ್ಗೆ ಭಯದ ವಾತಾವರಣ ಉಂಟಾಗದೆ ಗೌರವ ಇರುವಂತಾಗಬೇಕು.