ಹಾಸನ : (ನ್ಯೂಸ್ ಮಲ್ನಾಡ್ ವರದಿ) ಶಿಲ್ಪ ಕಲೆಗಳ ತವರೂರು, ಪುರಾತನ ದೇವಾಲಯಗಳನ್ನು ಹಾಗೂ ಇತಿಹಾಸವನ್ನು ಹೊಂದಿರುವ ಹಾಸನ ಜಿಲ್ಲೆಯಲ್ಲಿ ಹಿಂದೂಗಳ ಭಾವನೆಯನ್ನು ಹೊಂದಿರುವ ದೇವರ ವಿಗ್ರಹಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.
ಇದನ್ನೂ ಓದಿ : ಕಿಕ್ಕೇರಿಸಿಕೊಂಡು ಯುವಕ ಯುವತಿಯರು ಜೀಪಿನ ಟಾಪ್ ಮೇಲೆ ಸವಾರಿ, ಪೊಲೀಸರ ಕಡಕ್ ಆಕ್ಷನ್
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೆಕಲ್ಲು ತಿರುಪತಿ ದೇವಾಲಯದ ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣವಾಗುತ್ತಿದ್ದ ಹಾಗೂ ನಿರ್ಮಾಣವಾಗಿದ್ದ ಕೆಲ ಹಿಂದೂ ದೇವರುಗಳ ಮೂರ್ತಿಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆ ಮಾಲೆಕಲ್ಲು ತಿರುಪತಿ ದೇವಸ್ಥಾನಕ್ಕೆ ನಾಲ್ವರು ಆಗಮಿಸಿ ಕಲ್ಯಾಣಿಯಲ್ಲಿ ಈಜಾಡಿ, ದೇವಸ್ಥಾನದ ಆವರಣದಲ್ಲಿ ಧೂಮಪಾನ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ, ಈ ಕುರಿತಾಗಿ ಪ್ರಶ್ನಿಸಿದಾಗ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರನ್ನು ಬೆದರಿಸಿ ಓಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ನಂತರದಲ್ಲಿ ದೇವಾಲಯಕ್ಕೆ ಸಂಬಂಧಿಸಿದ ವಸ್ತುಸಂಗ್ರಹಾಲಯಕ್ಕೆ ತೆರಳಿ ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣವಾಗಿದ್ದ ಹಾಗೂ ನಿರ್ಮಾಣವಾಗುತ್ತಿದ್ದ ಮೂರ್ತಿಗಳನ್ನು ಮಾರಕಾಸ್ತ್ರಗಳಿಂದ ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆಯನ್ನು ಬೇರೆಯವರು ಗಮನಿಸುತ್ತಿರುವುದುನ್ನು ಅರಿತ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯ ನಂತರದಲ್ಲಿ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ್ ಗೌಡ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಆರೋಪಿಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಭಕ್ತರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯರು ದೇವಸ್ಥಾನದ ಬಳಿ ದೌಡಾಯಿಸಿದ್ದು ಯಾವುದೇ ರೀತಿಯ ಅಹಿತಕರ ವಾತಾವರಣ ನಿರ್ಮಾಣವಾಗದಂತೆ ಪೊಲೀಸರು ಹೆಚ್ಚಿನ ಬಂದೋಬಸ್ತ್ ನಲ್ಲಿ ತೊಡಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಧರ್ಮಗಳ ನಡುವಿನ ಸಂಘರ್ಷ ಇನ್ನೂ ಆರದೇ ಇರುವ ಈ ಸಮಯದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಜನರಲ್ಲಿ ಹೆಚ್ಚಿನ ಆತಂಕವನ್ನು ಸೃಷ್ಟಿಮಾಡಿದೆ.
ಈ ಕೃತ್ಯವನ್ನು ನಡೆಸಿದ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಸೆರೆಹಿಡಿದು ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ಭಕ್ತರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.




0 Comments