ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಧಿಕಾರಿಗಳ ಮುಂದೆಯೇ ವ್ಯಕ್ತಿಯೋರ್ವ ತನ್ನ ತಳ್ಳುಗಾಡಿಗೆ ಬೆಂಕಿ ಹಚ್ಚಿ ತನಗಾಗಿರುವ ಕಿರುಕುಳ ಹಾಗೂ ಅಧಿಕಾರಿಗಳ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ನಗರಸಭೆ ಅಧಿಕಾರಿಗಳು ಹಾಗೂ ರಸ್ತೆ ಬದಿಯ ತಳ್ಳುಗಾಡಿ ವರ್ತಕನ ನಡುವೆ ಉಂಟಾದ ವಾಗ್ವಾದ ಕೊನೆಯಲ್ಲಿ ತಳ್ಳುಗಾಡಿಗೆ ಬೆಂಕಿ ಕೊಡುವ ಮೂಲಕ ಅಂತ್ಯಕಂಡಿದೆ. 

ಹಣ್ಣು ತರಕಾರಿಗಳನ್ನು ತಳ್ಳುಗಾಡಿಯಲ್ಲಿ ಹಾಕಿಕೊಂಡು ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಯ ಗಾಡಿಯನ್ನು ಹೊತ್ತೊಯ್ಯಲು ಬಂದಿದ್ದ ನಗರಸಭೆ ಸಿಬ್ಬಂದಿಗಳ ಮೇಲೆ ಆಕ್ರೋಶಕ್ಕೀಡಾದ ವ್ಯಾಪಾರಿಯು ತನ್ನ ವ್ಯಾಪಾರದ ಗಾಡಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ನಗರಸಭೆ ಅಧಿಕಾರಿಗಳು ಮಲ್ಲಂದೂರು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ತಳ್ಳುಗಾಡಿಗಳನ್ನು ಹಾಕಿದ್ದು ಅದನ್ನು ನಗರಸಭೆಯ ಸೂಪರ್ವೈಸರ್ ಗಳು ಕಳೆದ ಮೂರು ತಿಂಗಳಿಂದ ಹೇಳುತ್ತಲೆ ಬಂದಿದ್ದು ಮತ್ತು ಮೂರು ತಿಂಗಳುಗಳಿಂದ ಸಂಚಾರಕ್ಕೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಸಮಸ್ಯೆಯಾದ ಕಾರಣ ತಳ್ಳುವ ಗಾಡಿಯ ಮಾಲೀಕರು ತಳ್ಳಿಕೊಂಡು ವ್ಯಾಪಾರ ಮಾಡುವಂತೆ ಸೂಚಿಸಲಾಗಿತ್ತ, ಆದರೂ ಸಹ ಯಾವುದೇ ಮಾನ್ಯತೆ ನೀಡದೆ ಇದ್ದುದರಿಂದ ಅಧಿಕಾರಿಗಳು ಮತ್ತೊಮ್ಮೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರೇ ಗಾಡಿಗೆ ಬೆಂಕಿ ಹಚ್ಚಿದ್ದಾರೆ, ಈ ಘಟನೆಗೂ ನಗರಸಭೆ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ ಅಧಿಕಾರಿಗಳು ಬೆಂಕಿ ಹಚ್ಚುವ ಕಾರ್ಯವನ್ನು ನಡೆಸಿಲ್ಲ ಎಂಬ ಸ್ಪಷ್ಟೀಕರಣ ನೀಡಿದೆ.

ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು ನನ್ನಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ, ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದೀರಿ, ನನಗೆ ಫೈನಾನ್ಸ್ ಗೆ ಹಣ ಕಟ್ಟುವುದೇ ಕಷ್ಟ ಅಂತಹುದರಲ್ಲಿ 500 - 1000 ರೂಪಾಯಿ ಹಣ ಕೇಳುತ್ತಾರೆ ಇವರಿಗೆ ನಾನು ಹೇಗೆ ನೀಡಲಿ ಎಂದು ತಮ್ಮಗೋಳನ್ನು ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಬಡ ವ್ಯಾಪಾರಿಗಳ ಮೇಲೆ ಈ ರೀತಿಯ ನಡೆ ಸರಿಯಲ್ಲ ಅವರಿಗೆ ಅನುಮತಿ ನೀಡಬೇಕು ಎಂಬೆಲ್ಲ ಅಭಿಪ್ರಾಯಗಳು ವ್ಯಕ್ತವಾಗಿದೆ.