ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಯಾಗಿದೆ, ಸರ್ಕಾರಿ ಇಲಾಖೆಯ ಯಾವುದೇ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಅಧಿಕಾರಿಗಳ ಮೇಲೆ ಗಮನ ಹರಿಸದೇ ಇರುವುದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಅವರ ಬೇಜವಾಬ್ದಾರಿತನವನ್ನು ತೋರುತ್ತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇವಲ ಶೃಂಗೇರಿಯಲ್ಲಿ ಮಾತ್ರ ಈ ಸಮಸ್ಯೆ ತಲೆದೋರಿಲ್ಲ, ಮೂರು ತಾಲೂಕಿನ ಅಧಿಕಾರಿಗಳ ವೈಫಲ್ಯಕ್ಕೆ ಶಾಸಕರ ಬೇಜವಾಬ್ದಾರಿಯುತ ನಡವಳಿಕೆ ನೇರಹೊಣೆ ಎಂದು ಆರೋಪಿಸಿದರು. ಈ ಭಾಗದ ಬಡವರನ್ನು ಇಂಬಳಕ್ಕಿಂತ ಹೆಚ್ಚಾಗಿ ಅಧಿಕಾರಿಗಳು ಹೀರುತ್ತಿದ್ದಾರೆ, ಶಾಸಕರು ಕರ್ನಾಟಕದ ವಿಧಾನಸಭೆಗೆ ಶಾಸಕರೇ ಹೊರತು ಕಾಂಗ್ರೆಸ್ ಪಕ್ಷಕ್ಕಲ್ಲ ಈ ಜವಾಬ್ದಾರಿಯನ್ನು ಅವರು ತಿಳಿದುಕೊಳ್ಳಬೇಕು ಎಂದರು.
ಇದನ್ನೂ ಓದಿ : ಚಿಕ್ಕಮಗಳೂರಿಗೆ ಮೇ 18 ರಂದು ಭೇಟಿ ನೀಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅಭ್ಯರ್ಥಿಯಾಗಿ ನಾನು ಪಕ್ಷದಿಂದ ಸ್ಪರ್ಧೆ ಮಾಡುವ ಕುರಿತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಹಾಗೂ ಮೂರೂ ತಾಲೂಕುಗಳ ಭಾಜಪಾ ಅಧ್ಯಕ್ಷರು ತಿಳಿಸುತ್ತಾರೆ, 2008 ರಿಂದ ಈ ವರೆಗೆ ಪಕ್ಷಗಳನ್ನು ಬದಲಿಸುತ್ತಲೆ ಇರುವವರಿಗೆ ಬಿಜೆಪಿಯ ಕುರಿತು ಮಾತನಾಡುವ ಅರ್ಹತೆಯಿಲ್ಲ - ಡಿ.ಎನ್ ಜೀವರಾಜ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಕೆಡಿಪಿ ಸಭೆಗಳೇ ನಡೆದಿಲ್ಲ :
ಜನರ ಸಮಸ್ಯೆಗಳನ್ನು ಬಗೆಹರಿಸಲು ನಡೆಯುವ ಕೆಡಿಪಿ ಸಭೆಗಳೇ ಸಮರ್ಪಕವಾಗಿ ನಡೆದಿಲ್ಲ, ನಾಲ್ಕು ವರ್ಷದಲ್ಲಿ ಎಷ್ಟು ಕೆಡಿಪಿ ಸಭೆಗಳು ನಡೆದಿವೆ ಎಂಬ ಲೆಕ್ಕವನ್ನು ಶಾಸಕರು ನೀಡಲಿ, ಅಧಿಕಾರಿಗಳನ್ನು ಜೀವರಾಜ್ ನೇಮಕ ಮಾಡುವುದಿಲ್ಲ, ಕರ್ನಾಟಕ ಸರ್ಕಾರ ನಿಯೋಜನೆ ಮಾಡುತ್ತದೆ, ಪ್ರತಿಯೊಂದಕ್ಕೂ ಜೀವರಾಜ್ ಬಿಡುವುದಿಲ್ಲ ಅವರಿಂದಾಗಿ ಈ ಕೆಲಸ ಆಗುತ್ತಿಲ್ಲ ಎಂಬ ಉತ್ತರಗಳು ಮಾತ್ರ ಶಾಸಕರಲ್ಲಿದೆ, ಬೇಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ಶಾಸಕರು ನಿಲ್ಲಿಸಿ ಅಭಿವೃದ್ದಿಯ ಕಡೆಗೆ ಗಮನ ಹರಿಸಬೇಕು ಎಂದರು.
94 ಸಿ ಹಗರಣದಲ್ಲಿ ಅನ್ಯಾಯಕ್ಕೊಳಗಾದವರ ಸಮಸ್ಯೆ ಕೇಳಿದ್ದೀರಾ ಶಾಸಕರೇ ?
ನಡೆದ 94 ಸಿ ಹಗರಣದಲ್ಲಿ ಅನೇಕರು ಅನ್ಯಾಯಕ್ಕೊಳಗಾಗಿದ್ದಾರೆ ಅವರೆಲ್ಲರ ನೋವನ್ನು ಅವರಿಗಾಗಿರುವ ಸಮಸ್ಯೆಯನ್ನು ನೀವು ಕೇಳಿದ್ದೀರಾ ಎಂದು ಶಾಸಕ ರಾಜೇಗೌಡರಿಗೆ ಡಿ.ಎನ್ ಜೀವರಾಜ್ ಪ್ರಶ್ನಿಸಿದ್ದಾರೆ. ಜವಾಬ್ದಾರಿಯಿಂದ ಶಾಸಕರು ತಪ್ಪಿಸಿಕೊಂಡು ಕೀಳು ಮಟ್ಟದ ರಾಜಕಾರಣವನ್ನು ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೆರೆ ಪರಿಹಾರದಲ್ಲಿ ಬಿಡುಗಡೆಯಾದ ಹಣವನ್ನು ಅದರಲ್ಲಿ ನಡೆಸಿದ ಕಾಮಗಾರಿಗಳ ಪಟ್ಟಿಯನ್ನು ಶಾಸಕರು ಬಿಡುಗಡೆ ಮಾಡಲಿ, ನನ್ನ ಅವಧಿಯಲ್ಲಿ ಬಿಡುಗಡೆಯಾದ ಹಣದಲ್ಲಿನ ಕಟ್ಟಡಗಳ ಉದ್ಘಾಟನೆಯನ್ನು ಯಾರಿಗೂ ಗೊತ್ತಾಗದಂತೆ ಶಾಸಕರು ನಡೆಸುತ್ತಿದ್ದಾರೆ. ಅವರ ವೈಫಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ನರಸಿಂಹರಾಜಪುರದಲ್ಲಿ ಬೃಹತ್ ಪ್ರತಿಭಟನೆಯನ್ನು ಮೇ 16 ರಂದು ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಮಸ್ವಾಮಿ ಶೆಟ್ಟಿಗದ್ದೆ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ, ಬಿಜೆಪಿ ಅಧ್ಯಕ್ಷರಾದ ಉಮೇಶ್ ತಲಗಾರು, ಅಂಬಳೂರು ರಾಮಕೃಷ್ಣ, ಶೃಂಗೇರಿ ಶಿವಣ್ಣ ಸೇರಿದಂತೆ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು.




0 Comments